Tuesday, January 13, 2026
Tuesday, January 13, 2026
spot_img

ಕಿಡ್ನಾಪ್ ಮಾಡಿ ಡ್ಯಾನ್ಸರ್​ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸರಿಗೆ ಫೋನ್ ಮಾಡಿ ಪ್ರಾಣ ಉಳಿಸಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

24 ವರ್ಷದ ಆರ್ಕೆಸ್ಟ್ರಾ ನರ್ತಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಮದ್ಯದ ಅಮಲಲ್ಲಿದ್ದ ಆರೋಪಿಯೊಬ್ಬನ ಮೊಬೈಲ್ ಬಳಸಿಕೊಂಡು ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಿದ್ದರಿಂದ ಆಕೆಯ ಪ್ರಾಣ ಉಳಿಯುವ ಜೊತೆಗೆ ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ರಾತ್ರಿ ಸುಮಾರು 9 ಗಂಟೆಗೆ ಕಾರಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಬಳಿಕ ಸುಮಾರು 25 ಕಿಲೋಮೀಟರ್ ದೂರದ ಗೋಡೌನ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಇದ್ದ ನಾಲ್ವರು ಆರೋಪಿಗಳೊಂದಿಗೆ ಸೇರಿ ಆಕೆಯನ್ನು ಹಿಂಸಿಸಿ ಬಲವಂತವಾಗಿ ಮದ್ಯ ಕುಡಿಸಿ ನೃತ್ಯ ಮಾಡಲು ಒತ್ತಾಯಿಸಲಾಗಿತ್ತು ಎನ್ನಲಾಗಿದೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.

ಅತ್ಯಾಚಾರದ ಬಳಿಕ ಐವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಮದ್ಯದ ಅಮಲಲ್ಲಿ ಇದ್ದ ಒಬ್ಬ ಆರೋಪಿ ಗೋಡೌನ್ ಒಳಗೇ ಮಲಗಿದ್ದಾನೆ. ಇದೇ ಸಂದರ್ಭವನ್ನು ಬಳಸಿಕೊಂಡ ಮಹಿಳೆ, ಆತನ ಮೊಬೈಲ್ ಮೂಲಕ ತುರ್ತು ಸಹಾಯ ಸಂಖ್ಯೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಬೀಗ ಹಾಕಿದ್ದ ಬಾಗಿಲು ಒಡೆದು ಒಳ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಬಂಧಿತ ಆರೋಪಿ ಸ್ಥಳೀಯ ನಿವಾಸಿ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Most Read

error: Content is protected !!