ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆ.ಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರೊಂದಿಗೆ ಪತ್ನಿ ಭವಾನಿ ರೇವಣ್ಣ ಅವರನ್ನೂ ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಸೇರಿ 7 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಭವಾನಿ ರೇವಣ್ಣರನ್ನ 8ನೇ ಆರೋಪಿಯಾಗಿ ಹೆಸರಿಸಲಾಗಿದೆ.
ರೇವಣ್ಣ ವಿರುದ್ಧ ಎಫ್‌ಐಆರ್ ರದ್ದು ಕೋರಿರುವ ಹಾಗೂ ರೇವಣ್ಣ ಜಾಮೀನು ರದ್ದಿಗೆ ಕೋರಿದ್ದ ಎರಡೂ ಅರ್ಜಿಗಳನ್ನು ಏಕಕಾಲಕಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಎಸ್‌ಐಟಿ ಪರ ಪ್ರೊ.ರವಿವರ್ಮಕುಮಾರ್ ವಾದ ಮಂಡಿಸಿದರು. ಸದ್ಯ ಜಾಮೀನು ರದ್ದು ಕೋರಿರುವ ಸಂಬಂಧ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಎಫ್‌ಐಆರ್ ರದ್ದು ಕೋರಿರುವ ಅರ್ಜಿ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಕೋರ್ಟ್ ಮುಂದೂಡಿದೆ.
ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳೇನು?
ಎಸ್‌ಐಟಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ. ಪ್ರಕರಣದ ಆರೋಪಿಗಳಾದ ರೇವಣ್ಣ ಮತ್ತು ಭವಾನಿ ಅಣತಿಯ ಮೇರೆಗೆ ಸಂತ್ರಸ್ತೆಯ ಅಪಹರಣ ನಡೆದಿದೆ. ರೇವಣ್ಣ ಏಪ್ರಿಲ್ 23ರಂದು ಸಂತ್ರಸ್ತೆಯನ್ನು ಹೊಳೆನರಸೀಪುರಕ್ಕೆ ಕರೆದು ಬೆದರಿಕೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗಬಾರದು ಅಂತ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಏ.26ರಂದೇ ಸತೀಶ್ ಬಾಬು ಅವರ ಮೂಲಕ ಸಂತ್ರಸ್ತೆಯನ್ನ ಅಪಹರಣ ಮಾಡಿಸಿದ್ದಾರೆ ಎಸ್‌ಐಟಿ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಮಹಿಳೆಯನ್ನ ಅಪಹರಿಸಿ 7ನೇ ಆರೋಪಿ ಮನೆಯಲ್ಲಿ ಇರಿಸಲಾಗಿತ್ತು. ಆಕೆಗೂ ಆರೋಪಿಗೂ ಯಾವುದೇ ಸಂಬಂಧ ಇರಲಿಲ್ಲ. ಪೊಲೀಸರು ಆ ಸ್ಥಳದಲ್ಲಿ ಮಹಜರ್ ನಡೆಸಿದಾಗ, ಆಕೆಯ ಕೂದಲು ದೊರೆತಿದೆ. 7ನೇ ಆರೋಪಿ ಈ ಹಿಂದೆ ರೇವಣ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಭವಾನಿ ಅವರು ಕೀರ್ತಿ ಮತ್ತು ಮನು ಜೊತೆಯಲ್ಲಿ ಮಾತನಾಡಿದ್ದರು. ಆರೋಪಿಗಳ ಜೊತೆ ಭವಾನಿ ಮಾತನಾಡಿರೋದಕ್ಕೆ 22 ಆಡಿಯೋ ಕ್ಲಿಪ್ಪಿಂಗ್‌ಗಳು ಸಿಕ್ಕಿದೆ. ಫೋನ್‌ನಲ್ಲಿಯೇ ಭವಾನಿ ಅವರು ನಿರಂತರವಾಗಿ ಬೆದರಿಕೆ ಹಾಕಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.