ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂದು ತಿಂಗಳಿಂದ ಸರಗೂರು ಹಾಗೂ ಸುತ್ತಮುತ್ತ ಜನರ ಮೇಲೆ ದಾಳಿ ನಡೆಸಿ ಮೂವರ ಸಾವಿಗೆ ಕಾರಣವಾಗಿದ್ದ ಕಿರಾತಕ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಅಂತಿಮವಾಗಿ ಸೆರೆ ಹಿಡಿದಿದ್ದಾರೆ. ಈ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಮಾಹಿತಿ ನೀಡಿದ್ದು, “ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ” ಎಂದು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಸರಗೂರು ತಾಲ್ಲೂಕಿನ ಹೆಡಿಯಾಲ, ಮೊಳೆಯೂರು ಹಾಗೂ ನುಗು ಪ್ರದೇಶಗಳಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿದ್ದವು. ಹುಲಿ ಕಾಡು ಪ್ರದೇಶದಲ್ಲಿಯೇ ಬೇಟೆ ಆಡಲು ಅಸಮರ್ಥವಾಗಿದ್ದ ಕಾರಣದಿಂದ ಪಕ್ಕದ ಗ್ರಾಮಗಳಿಗೆ ನುಗ್ಗಿ ಜನರು ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಹುಲಿಗೆ ಸುಮಾರು 12ರಿಂದ 13 ವರ್ಷ ವಯಸ್ಸಾಗಿದ್ದು, ಹಲ್ಲುಗಳು ದುರ್ಬಲವಾಗಿರುವುದರಿಂದ ಕಾಡಿನ ಬೇಟೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿ ಹೇಳಿದೆ.
ಸಚಿವ ಖಂಡ್ರೆ ಅವರು ಮೃತರ ಮರಣೋತ್ತರ ಪರೀಕ್ಷಾ ವರದಿ ಹಾಗೂ ಹುಲಿಯ ಡಿಎನ್‌ಎ ವರದಿ ಪರಿಶೀಲಿಸಿ, ಇದೇ ಹುಲಿ ದಾಳಿಗೆ ಕಾರಣವೇ ಎಂದು ಖಚಿತಪಡಿಸಿಕೊಳ್ಳಲು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಂಡೀಪುರ ಹಾಗೂ ನಾಗರಹೊಳೆಯ ಅರಣ್ಯದ ಅಂಚಿನಲ್ಲಿ ಹುಲಿ ಚಟುವಟಿಕೆ ಹೆಚ್ಚಾಗಿರುವುದರಿಂದ ಅಲ್ಲಿ ಸಫಾರಿ ತಾತ್ಕಾಲಿಕವಾಗಿ ನಿಲ್ಲಿಸಿ, ಎಲ್ಲ ಸಿಬ್ಬಂದಿಯನ್ನೂ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಬಂಡೀಪುರ, ನಾಗರಹೋಳೆ ಸೇರಿದಂತೆ ಅನೇಕ ವಲಯಗಳ ಅರಣ್ಯ ಅಧಿಕಾರಿಗಳು ಭಾಗವಹಿಸಿದ್ದರು. ಅರಣ್ಯ ಇಲಾಖೆ ಈಗ ಜನ ವಸತಿ ಪ್ರದೇಶಗಳ ಬಳಿ ಇತರ ಹುಲಿಗಳ ಸಂಚಾರವಿದ್ದರೆ ಅವುಗಳ ಮೇಲೂ ನಿಗಾವಹಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

