ಹೊಸದಿಗಂತ ವರದಿ, ಮಂಡ್ಯ:
ಟವೆಲ್ನಿಂದ ಬಿಗಿದು ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯ ಹೆಬ್ಬಳ್ಳ ಸಮೀಪವಿರುವ ಕಾಫಿ ಚಿಕೋರಿ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಗರದ ವಿದ್ಯಾನಗರದ ನಿವಾಸಿ, ಚಿಕೋರಿ ಕಾರ್ಖಾನೆಯ ಮಾಲೀಕರಾಗಿದ್ದ ರಮೇಶ್ ಅವರ ಪತ್ನಿ ನಳಿನಿ ರಮೇಶ್ (62) ಎಂಬವರೇ ಕೊಲೆಯಾದವರಾಗಿದ್ದಾರೆ.
ಕಾಫಿ ಪುಡಿ ಅಂಗಡಿ ಇಟ್ಟುಕೊಂಡಿದ್ದ ರಮೇಶ್ ಅವರು, ಉದ್ಯಮ ಮಾಡಲು ಮನೆ ಮತ್ತು ಚಿಕೋರಿ ಕಾರ್ಖಾನೆಯನ್ನು ಒತ್ತೆ ಇಟ್ಟು ಖಾಸಗಿ ಬ್ಯಾಂಕ್ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗದ ಕಾರಣ ಬ್ಯಾಂಕ್ನವರು ಮನೆ ಮತ್ತು ಕಾರ್ಖಾನೆಯನ್ನು ಕೋರ್ಟ್ ಮೂಲಕ ತಮ್ಮ ಸುಪರ್ದಿಗೆ ಪಡೆದಿದ್ದರು.
ಇದರಿಂದಾಗಿ ದಂಪತಿ ಕೆಲ ದಿನ ಮಂಡ್ಯ ತೊರೆದು ಮೈಸೂರಿನ ವೃದ್ದಾಶ್ರಮ ಸೇರಿದ್ದರು. ಇತ್ತೀಚೆಗೆ ನಳಿನಿ ಅವರು ವೃದ್ದಾಶ್ರಮ ತೊರೆದು ಚಕೋರಿ ಕಾರ್ಖಾನೆಯಲ್ಲಿದ್ದ ಮನೆಗೆ ಬಂದು ನೆಲೆಸಿದ್ದರು. ಆದರೆ, ಮಂಗಳವಾರ ರಾತ್ರಿ ಯಾರೋ ದುಷ್ಕರ್ಮಿಗಳು ಟವೆಲ್ನಿಂದ ಬಿಗಿದು ಹತ್ಯೆ ಮಾಡಿದ್ದಾರೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಡಿವೈಎಸ್ಪಿ ಶಿವಮೂರ್ತಿ, ಗ್ರಾಮಾಂತರ ಠಾಣೆಯ ಸಿಪಿಐ ಶಿವಪ್ರಸಾದ್ರಾವ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ತಂದೆ-ತಾಯಿಯ ನಡುವೆ ವಿವಾದ ಉಂಟಾಗಿತ್ತೆನ್ನಾಲಾಗಿದ್ದು, ಈ ಸಂಬಂಧ ಮಗ ನಿತಿನ್ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.