ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ನಲ್ಲಿ ಟ್ರಾಫಿಕ್ ತಪಾಸಣೆ ವೇಳೆ 17 ವರ್ಷದ ಯುವಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಸಿಕ್ಕಸಿಕ್ಕ ಕಟ್ಟಡಗಳಿಗೆ, ಪೊಲೀಸ್ ವಾಹನಗಳಿಗೆ ಜನರು ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯನ್ನು ಕೊಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಕೊಲೆ ಆಪಾದನೆ ಹೊರಿಸಿ, ನ್ಯಾಯಾಧೀಶರು ತನಿಖೆ ನಡೆಸಲಿದ್ದಾರೆ ಎಂದು ಫ್ರಾನ್ಸ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಇಬ್ಬರು ಪೊಲೀಸರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಇತ್ತ ಫ್ರಾನ್ಸ್ನಲ್ಲಿ ಪ್ರತಿಭಟನೆ ಉಗ್ರರೂಪ ಪಡೆದಿದ್ದು, ಇಡೀ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಸಂಬಂಧ ದೇಶಾದ್ಯಂತ ಈವರೆಗೂ 400 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದ್ದು, ತುರ್ತು ಸಭೆ ನಡೆಸಿದ್ದೇವೆ, ಚಾಲಕನ ಹತ್ಯೆ ಅನಿರೀಕ್ಷಿತ ಹಾಗೂ ಅಕ್ಷಮ್ಯ, ಇದನ್ನು ಸಮರ್ಥಿಸುವುದಿಲ್ಲ. ಆದರೆ ಜನತೆ ಶಾಂತವಾಗಬೇಕು ಎಂದಿದ್ದಾರೆ.
ಜನರು ಸಾರ್ವಜನಿಕ ಕಟ್ಟಡ, ಸಿಕ್ಕಸಿಕ್ಕ ಕಾರ್ಗಳಿಗೆ ಬೆಂಕಿ ಹಚ್ಚಿದ್ದು, ಇವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಯುವಕನನ್ನು ಕೊಂದ ಪೊಲೀಸ್ ಆಫೀಸರ್ಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಟ್ರಾಫಿಕ್ ತಪಾಸಣೆ ವೇಳೆ 17 ವರ್ಷದ ನೌಹೆಲ್ ಎಂಬಾತನನ್ನು ಗುಂಡಿಕ್ಕಿ ಪೊಲೀಸರು ಕೊಂದಿದ್ದರು. ಕಾರಣವಿಲ್ಲದೆ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಸಿಟ್ಟಿಗೆದ್ದ ಫ್ರಾನ್ಸ್ ಜನತೆ ಪೊಲೀಸರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಈಗಾಗಲೇ 50 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. 40 ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಬೆಂಕಿ ಇಡಲಾಗಿದೆ.