ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಹತ್ಯೆಯಾಗಿದ್ದಾರೆ. ಈ ಕುರಿತು ಇಸ್ರೇಲ್ ಸೇನೆಯೇ ಅಧಿಕೃತವಾಗಿ ಘೋಷಣೆ ಮಾಡಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯ ರೂವಾರಿಯಾದ ಮೊಹಮ್ಮದ್ ಡೈಫ್‌ನನ್ನು ಇಸ್ರೇಲ್ ಸೇನೆಯು ದಾಳಿ ಮೂಲಕ ಹತ್ಯೆ ಮಾಡಿದೆ. ‘ಇಸ್ರೇಲ್ ಡಿಫೆನ್ಸ್ ಪಡೆಗಳು ಜುಲೈ 13ರಂದು ಖಾನ್ ಯುನಿಸ್‌ನಲ್ಲಿ ನಡೆಸಿದ ವಾಯುದಾಳಿಯಲ್ಲಿ ಮೊಹಮ್ಮದ್ ಡೈಫ್ ಹತ್ಯೆಗೀಡಾಗಿದ್ದಾನೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಐಡಿಎಫ್ ದಾಳಿ ನಡೆಸಿ, ಅಕ್ಟೋಬರ್ 7ರ ದಾಳಿಯ ಮಾಸ್ಟರ್‌ಮೈಂಡ್‌ನನ್ನು ಹತ್ಯೆ ಮಾಡಲಾಗಿದೆ’ ಎಂದು ಇಸ್ರೇಲ್ ಮಾಹಿತಿ ನೀಡಿದೆ.
ಕಳೆದ ಎರಡು ದಿನಗಳಲ್ಲಿ ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ ಕೊಂದು ಹಾಕಿದೆ. ಈ ಮೂಲಕ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮಿಲಿಟರಿ ಮುಖ್ಯಸ್ಥನನ್ನೂ ಹೊಡೆದುರುಳಿಸಿರುವುದಾಗಿ ಇಸ್ರೇಲ್ ಘೋಷಣೆ ಮಾಡಿದೆ. ಇದರೊಂದಿಗೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಪ್ರಮುಖ ಉಗ್ರರನ್ನು ಇಸ್ರೇಲ್ ಹತ್ಯೆ ಮಾಡಿದಂತಾಗಿದೆ.
ಮೊಹಮ್ಮದ್ ಡೈಫ್ ಯಾರು?
ಮೊಹಮ್ಮದ್ ಡೈಫ್ ಹಮಾಸ್ ಉಗ್ರ ಸಂಘಟನೆಯ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಈತ 1965ರಲ್ಲಿ ಜನಿಸಿದ್ದು, ಈತ ತನ್ನ 15ನೇ ವಯಸ್ಸಿನಲ್ಲಿಯೇ ಹಮಾಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ. ಮೊಹಮ್ಮದ್ ಡೈಫ್ 2021ರಲ್ಲಿ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದು, ಸಾವಿರಾರು ರಾಕೆಟ್‌ಗಳು ಇಸ್ರೇಲ್ ಮೇಲೆ ಎರಗುವ ಯೋಜನೆಗೆ ಈತನೇ ರೂವಾರಿ ಎಂದು ತಿಳಿದುಬಂದಿದೆ. ಆದರೂ, ಈತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.