ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ನದಿಭಾಗ ಮತ್ತು ಬೆಳಂಬಾರ ನಡುವೆ ಚಿಕ್ಕ ನೀರಾವರಿ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ಯೋಜನೆಗೆ ನದಿಭಾಗ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂಕೋಲಾ ತಹಶೀಲ್ಧಾರ ಪ್ರವೀಣ ಹುಚ್ಚಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ನದಿಭಾಗದ ಗ್ರಾಮಸ್ಥರು ಈ ಯೋಜನೆ ಜಾರಿಯಾದಲ್ಲಿ ತಮಗೆ ತೀವ್ರ ಸಮಸ್ಯೆ ಆಗಲಿದೆ ಆದ್ದರಿಂದ ಕಾಮಗಾರಿ ಸ್ಥಗಿತಗೊಳಿಸಬೇಕು
ಬೇಕಾದಲ್ಲಿ ಈಗ ಕೆಲಸ ನಡೆಸಲಾಗುತ್ತಿರುವ 200 ಮೀಟರ್ ದೂರದಲ್ಲಿ ನಿರ್ಮಾಣ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಬೆಳಂಬಾರ, ಶೆಟಗೇರಿ, ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳು ಮತ್ತು ಜನತೆ ಈ ಯೋಜನೆಯಿಂದ ಸಾವಿರಾರು ಜನರಿಗೆ ಅನುಕೂಲ ಆಗಲಿದೆ ಯಾವುದೇ ಕಾರಣಕ್ಕೂ ಈ ಯೋಜನೆ ಕೈಬಿಡಬಾರದು ಸ್ಥಳೀಯ ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡರು.
ಸ್ಥಳದಲ್ಲಿ ಉಪಸ್ಥಿತರಿದ್ದ ಚಿಕ್ಕ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಾತನಾಡಿ ಉಪ್ಪು ನೀರಿನ ಸಮಸ್ಯೆ ತಡೆಯುವ ಉದ್ದೇಶದಿಂದ ಕಿಂಡಿ ಆಣೆಕಟ್ಟು ಯೋಜನೆ ರೂಪಿಸಲಾಗಿದೆ ಮಳೆಗಾಲದಲ್ಲಿ ಆಣೆಕಟ್ಟಿನ ಕಿಂಡಿಗಳನ್ನು ತೆರೆದಿಡಲಾಗುತ್ತಾದೆ, ಬೇಸಿಗೆಯಲ್ಲಿ ಕಿಂಡಿ ಮುಚ್ಚಿ ಉಪ್ಪು ನೀರು ಹಳ್ಳಕ್ಕೆ ಪ್ರವೇಶಿಸಿದಂತೆ ತಡೆಯಲಾಗುತ್ತದೆ ಇದರಿಂದಾಗಿ ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.
ಅಧಿಕಾರಿಗಳ ಮಾತಿನಿಂದ ಸಮಾಧಾನಗೊಳ್ಳದ ನದಿಭಾಗ ಗ್ರಾಮಸ್ಥರು ಈ ಯೋಜನೆಯಿಂದ ನದಿಭಾಗ ಜನರಿಗೆ ಯಾವುದೇ ಪ್ರಯೋಜನ ಇಲ್ಲ ಕೃಷಿ ಭೂಮಿಗೆ ನೀರು ನುಗ್ಗುತ್ತದೆ, ಉಪ್ಪು ನೀರಿನ ಸಮಸ್ಯೆ ಹೆಚ್ಚುತ್ತದೆ ಎಂದು ಅಸಮಾಧಾನಕ್ಕೆ ವ್ಯಕ್ತಪಡಿಸಿದರು.
ಸ್ಥಳೀಯ ಪ್ರಮುಖ ಅರುಣ ನಾಯ್ಕ ಮಾತನಾಡಿ ಬೇಸಿಗೆಯಲ್ಲಿ ಗೇಟ್ ಹಾಕುವುದರಿಂದ ನದಿಭಾಗದಲ್ಲಿ ಉಪ್ಪು ನೀರು ಸಂಗ್ರಹ ಹೆಚ್ಚಲಿದೆ, ಹುಣ್ಣಿಮೆ ಅಮವಾಸೆ ಸಂದರ್ಭದಲ್ಲಿ
ಸಮುದ್ರದ ನೀರಿನ ಮಟ್ಟ ಏರಿಕೆ ಇರುವುದರಿಂದ ಉಬ್ಬರದ ಕಾಲದಲ್ಲಿ ಉಪ್ಪು ನೀರು ಕೃಷಿ ಭೂಮಿಗೆ ಮತ್ತು ಜನರ ವಾಸಸ್ಥಳಕ್ಕೆ ನುಗ್ಗಲಿದೆ ಎಂದರು.
ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ನೀರು ಕಟ್ಟುವುದರಿಂದ ಹಳ್ಳ ಮತ್ತು ಸಮುದ್ರ ಒಂದಾಗಿ ಈ ಪ್ರದೇಶದಲ್ಲಿ ಮರಳು ತುಂಬಿ ಸಾಂಪ್ರದಾಯಿಕ ಕೋಡಿ ಕಡಿಯಲು ಸಾಧ್ಯವಾಗದೇ ಸುತ್ತ ಮುತ್ತಲಿನ ಪ್ರದೇಶ ಮುಳುಗಡೆ ಆಗಲಿದೆ ಎಂದು ಗ್ರಾಮಸ್ಥರ ಪರವಾಗಿ ಅಭಿಪ್ರಾಯ ತಿಳಿಸಿದರು.
ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ, ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ, ಕುಮಾರ ಕಾಂಬಳೆ, ಗೀತಾ ಶಿರ್ಶಿಕರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಬಂದೋಬಸ್ತ್ ವ್ಯವಸ್ಥೆ ಕೈಗೊಂಡರು.