ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲೇ ಸತತ ಎರಡು ಪಂದ್ಯಗಳಲ್ಲಿ ಆಶಾದಾಯಕ ಆಟ ನೀಡದೆ ಒತ್ತಡದಲ್ಲಿದ್ದ ವಿರಾಟ್ ಕೊಹ್ಲಿ, ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ಮರಳಿ ಬಂದಿದ್ದಾರೆ. ಶಾಂತ, ಪರಿಪಕ್ವ ಹಾಗೂ ಆಕ್ರಮಣಕಾರಿ ಶೈಲಿಯ ಅಜೇಯ 74 ರನ್‌ಗಳ ಇನ್ನಿಂಗ್ಸ್ ಮೂಲಕ ಕೊಹ್ಲಿ ಕೇವಲ ತಮ್ಮ ಖಾತೆ ತೆರೆಯುವುದಲ್ಲದೆ, ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು ಹಲವು ವೈಯಕ್ತಿಕ ದಾಖಲೆಗಳನ್ನೂ ಬರೆದಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಔಟಾದ ಬಳಿಕ ಮೈದಾನಕ್ಕಿಳಿದ ಕೊಹ್ಲಿ, ಆರಂಭದಲ್ಲಿ ಸಂಯಮದಿಂದ ಬ್ಯಾಟಿಂಗ್ ನಡೆಸಿ ನಂತರ ವೇಗ ಹೆಚ್ಚಿಸಿದರು. ಕೇವಲ 56 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿ, ಆಸ್ಟ್ರೇಲಿಯಾ ವಿರುದ್ಧದ ತಮ್ಮ ಒಟ್ಟು ಏಕದಿನ ರನ್‌ಗಳನ್ನು 2500ಕ್ಕೆ ತಲುಪಿಸಿದರು. ಇದರಿಂದ ಅವರು ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಿದಾರೆ. ಏಕದಿನ ಕ್ರಿಕೆಟ್‌ನಲ್ಲಿ 14,235 ರನ್‌ಗಳೊಂದಿಗೆ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕುಮಾರ್ ಸಂಗಕ್ಕಾರ (14,234) ಅವರನ್ನು ಹಿಂದಿಕ್ಕಿ ಕೊಹ್ಲಿ ಇದೀಗ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ.
ಅದರ ಜೊತೆಗೆ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಪಾಲುದಾರಿಕೆಗಳ ಪಟ್ಟಿಯಲ್ಲೂ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ 99 ಶತಕ ಪಾಲುದಾರಿಕೆಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಕೊಹ್ಲಿ 82 ಶತಕ ಪಾಲುದಾರಿಕೆಗಳೊಂದಿಗೆ ಅವರ ಹಿಂದೆ ನಿಂತಿದ್ದಾರೆ.
ಕೊಹ್ಲಿ-ರೋಹಿತ್ ಶರ್ಮಾ ಜೋಡಿ ಕೂಡ ದಾಖಲೆ ಬರೆದಿದ್ದು, ಇಬ್ಬರು ಒಟ್ಟಿಗೆ 101 ಪಂದ್ಯಗಳಲ್ಲಿ 19 ಶತಕ ಪಾಲುದಾರಿಕೆಗಳನ್ನು ದಾಖಲಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿನ ಮೂರನೇ ಅತಿ ಹೆಚ್ಚು ಶತಕ ಪಾಲುದಾರಿಕೆ.
ಸಿಡ್ನಿ ಪಂದ್ಯದಲ್ಲಿ ಮ್ಯಾಥ್ಯೂ ಶಾರ್ಟ್ ಅವರ ಕ್ಯಾಚ್‌ನಿಂದಾಗಿ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದರು. ಒಂದು ಎದುರಾಳಿ ತಂಡದ ವಿರುದ್ಧ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಕೀರ್ತಿ ಅವರಿಗೆ ಸೇರಿದೆ. 78 ಕ್ಯಾಚ್‌ಗಳೊಂದಿಗೆ ಅವರು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ದಾಖಲೆ ಮುರಿದರು.

