ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾ ರಾಜ್ಯ ಬೃಹತ್ ಮತಾಂತರ ಜಾಲ ಪತ್ತೆಯಾದ ಎರಡು ದಿನಗಳ ನಂತರ ಉತ್ತರ ಪ್ರದೇಶ ಪೊಲೀಸರು ಸೋಮವಾರ ಪ್ರಕರಣದ ಕಿಂಗ್ ಪಿನ್ ನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.
ಫಿರೋಜ್ ಬಾದ್ ನ ನಿವಾಸಿ ಅಬ್ದುಲ್ ರೆಹಮಾನ್ ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ. ಇದರೊಂದಿಗೆ ಈ ಪ್ರಕರಣದಲ್ಲಿ ಇಲ್ಲಿಯವರೆಗೂ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಹಮಾನ್ ಈ ಗ್ಯಾಂಗ್ ನ ಕಿಂಗ್ ಪಿನ್ ಆಗಿದ್ದಾನೆ. ಈತನನ್ನು ಗ್ಯಾಂಗ್ ಸದಸ್ಯರು ರೆಹಮಾನ್ ಚಾಚಾ ಎಂದು ಕರೆಯುತ್ತಿದ್ದರು ಎಂದು ಆಗ್ರಾ ಪೊಲೀಸ್ ಕಮಿಷನರ್ ದೀಪಕ್ ಕುಮಾರ್ ಹೇಳಿದ್ದಾರೆ.
1990ರಲ್ಲಿ ತಾನೇ ಸ್ವತ: ಇಸ್ಲಾಂಗೆ ಮತಾಂತರಗೊಂಡಿದ್ದ ಅಬ್ದುಲ್ ರೆಹಮಾನ್, ತದನಂತರ ದೆಹಲಿಗೆ ಹೋಗಿದ್ದರು.ಅದಕ್ಕೂ ಮುನ್ನಾ ಕಲೀಂ ಸಿದ್ದಿಕಿ ಈ ಮತಾಂತರ ಜಾಲದ ಕಿಂಗ್ ಪಿನ್ ಆಗಿದ್ದರು. ಆದರೆ 2021ರಲ್ಲಿ ಉತ್ತರ ಪ್ರದೇಶದ STF ಪೊಲೀಸರು ಸಿದ್ದಿಕಿಯನ್ನು ಬಂಧಿಸಿದ್ದರು. 2024ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಆಗಿತ್ತು. ತದನಂತರ ರೆಹಮಾನ್ ಮತಾಂತರ ಜಾಲದ ಕಿಂಗ್ ಪಿನ್ ಆಗಿದ್ದರು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ರೆಹಮಾನ್‌ನಿಂದ ಹಲವು ಧಾರ್ಮಿಕ ಸಾಹಿತ್ಯದ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನನ್ನು ವಶಕ್ಕೆ ಪಡೆದ ನಂತರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.