ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಸಿನಿಮಾ, ವೆಬ್‌ಸೀರೀಸ್‌ನಲ್ಲಿ ಒಂದಾದ್ರೂ ಲಿಪ್‌ಲಾಕ್ ಸೀನ್ ಇದ್ದೇ ಇರುತ್ತದೆ. ಕನ್ನಡದಲ್ಲಿ ಈ ಟ್ರೆಂಡ್ ಕಡಿಮೆ ಆದರೆ ಬೇರೆ ಭಾಷೆಗಳ ಸಿನಿಮಾ ಹಾಗೂ ಸೀರಿಸ್‌ನಲ್ಲಿ ಸ್ಕ್ರಿಪ್ಟ್ ಡಿಮ್ಯಾಂಡ್ ಹೆಸರಿನಲ್ಲಿ ನಾಲ್ಕೈದು ಕಿಸ್ಸಿಂಗ್ ಸೀನ್ಸ್ ಇದ್ದೇ ಇರುತ್ತದೆ. ಆದರೆ ಈ ಲಿಪ್‌ಲಾಕ್ ಸೀನ್ಸ್ ಈಗಿನ ಟ್ರೆಂಡ್ ಅಲ್ಲ. ಈ ಸೀನ್ಸ್ 92 ವರ್ಷದ ಹಳೆಯ ಸಿನಿಮಾದಲ್ಲಿಯೂ ಇದೆ!
ಹೌದು, ಭಾರತೀಯ ಚಿತ್ರರಂಗದಲ್ಲಿ ಮೊದಲ ಲಿಪ್ ಲಾಕ್ ದೃಶ್ಯವು 1933ರಲ್ಲಿ ಬಿಡುಗಡೆಯಾದ ‘ಕರ್ಮ’ ಚಿತ್ರದಲ್ಲಿತ್ತು. ನಟಿ ದೇವಿಕಾ ರಾಣಿ ಮತ್ತು ಹಿಮಾಂಶು ರಾಯ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಕರ್ಮ ಚಿತ್ರದಲ್ಲಿ ದೇವಿಕಾ ರಾಣಿ ಮತ್ತು ಹಿಮಾಂಶು ರಾಯ್ ನಡುವಿನ ಈ ದೃಶ್ಯವು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಯಿತು. ಈ ಸಿನಿಮಾದ ಲಿಪ್ ಲಾಕ್ ದೃಶ್ಯ ಸುಮಾರು ನಾಲ್ಕು ನಿಮಿಷಗಳ ಕಾಲ ಇತ್ತು ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಅದು ತುಂಬಾ ವಿವಾದಾತ್ಮಕವೂ ಆಯಿತು.
‘ಕರ್ಮ’ ಹಿಂದಿ-ಇಂಗ್ಲಿಷ್ ದ್ವಿಭಾಷಾ ಚಿತ್ರವಾಗಿದ್ದು, ದೇವಿಕಾ ರಾಣಿಯವರ ಪತಿಯೂ ಆಗಿರುವ ಹಿಮಾಂಶು ರಾಯ್ ಇದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ನಂತರ, ಚಲನಚಿತ್ರಗಳಲ್ಲಿ ಲಿಪ್ ಲಾಕ್ ತುಂಬಾ ಸಾಮಾನ್ಯವಾಗಿತ್ತು. ದೇವಿಕಾ ರಾಣಿ ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಕೂಡ ಹೌದು. ಆ ಸಮಯದಲ್ಲಿ ಅವರು ತುಂಬಾ ಧೈರ್ಯದಿಂದ ವರ್ತಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದರು.