ಮನೆ ಎಷ್ಟು ಸ್ವಚ್ಛವಾಗಿಟ್ಟರೂ ಜಿರಳೆಗಳ ಕಾಟ ಅನೇಕರಿಗೆ ತಲೆನೋವಾಗಿಯೇ ಉಳಿದಿದೆ. ಕಿಚನ್‌ನ ಒಂದು ಮೂಲೆ, ಸಿಂಕ್ ಕೆಳಭಾಗ, ಕಪಾಟಿನ ಹಿಂದೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಮತ್ತೆ ಬರುತ್ತೆ ಈ ಜಿರಳೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ಪ್ರೇಗಳು ಕ್ಷಣಿಕ ಪರಿಹಾರ ನೀಡಬಹುದು. ಆದರೆ ಅವುಗಳಿಂದ ಉಸಿರಾಟದ ಸಮಸ್ಯೆ, ಚರ್ಮ ಅಲರ್ಜಿ, ಮಕ್ಕಳಿಗೂ ಅಪಾಯ ಎಂಬ ಭಯ ಬೇರೆ. ಹೀಗಾಗಿ ಜಿರಳೆಗಳನ್ನು ಹೋಗಲಾಡಿಸಲು ನೈಸರ್ಗಿಕ ಮತ್ತು ಸುರಕ್ಷಿತ ಮಾರ್ಗಗಳತ್ತ ಗಮನ ಹರಿಸುವುದು ಒಳಿತು.
ಅಡುಗೆ ಮನೆಯಲ್ಲೇ ಸಿಗುವ ಪುಲಾವ್ ಎಲೆಗಳು (ಬೇ ಎಲೆ) ಜಿರಳೆಗಳಿಗೆ ಸಹಿಸಲಾಗದ ವಾಸನೆಯನ್ನು ಹೊರಸೂಸುತ್ತವೆ. ಕೆಲವು ಬೇ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಅದನ್ನು ಬಿಸಿ ನೀರಿನಲ್ಲಿ ಕುದಿಸಿ ತಣ್ಣಗಾದ ಬಳಿಕ ಮನೆಯ ಮೂಲೆಗಳು, ಕಿಚನ್ ಸಿಂಕ್ ಹತ್ತಿರ ಸಿಂಪಡಿಸಿದರೆ ಜಿರಳೆಗಳು ಆ ಪ್ರದೇಶವನ್ನು ತಪ್ಪಿಸಲು ಆರಂಭಿಸುತ್ತವೆ.
ಬೇವಿನ ಎಲೆಗಳು ಅಥವಾ ಬೇವಿನ ಎಣ್ಣೆಯ ವಾಸನೆ ಜಿರಳೆಗಳಿಗೆ ಭಯ ಹುಟ್ಟಿಸುವಂತದ್ದು. ಜಿರಳೆಗಳು ಓಡಾಡುವ ಜಾಗಗಳಲ್ಲಿ ಸ್ವಲ್ಪ ಬೇವಿನ ಎಣ್ಣೆ ಹಚ್ಚಿದರೆ ಅವು ಅಲ್ಲಿ ನೆಲೆಸುವುದಿಲ್ಲ. ಲವಂಗದ ತೀವ್ರ ವಾಸನೆಯೂ ಇದೇ ರೀತಿ ಕೆಲಸ ಮಾಡುತ್ತದೆ. ಲವಂಗವನ್ನು ಸ್ವಲ್ಪ ಪುಡಿ ಮಾಡಿ ಅಥವಾ ಇಡೀ ಲವಂಗವನ್ನೇ ಜಿರಳೆ ಕಾಣಿಸುವ ಕಡೆ ಇಟ್ಟರೆ ಅವು ದೂರ ಸರಿಯುತ್ತವೆ.
ಇನ್ನೊಂದು ಸರಳ ಉಪಾಯ ಅಡಿಗೆ ಸೋಡಾ ಮತ್ತು ಸಕ್ಕರೆ ಮಿಶ್ರಣ. ಈ ಮಿಶ್ರಣವನ್ನು ಜಿರಳೆಗಳು ಓಡಾಡುವ ಜಾಗಗಳಲ್ಲಿ ಇಟ್ಟರೆ, ವಾಸನೆ ಮತ್ತು ಪರಿಣಾಮದಿಂದ ಅವು ಆ ಸ್ಥಳವನ್ನು ಬಿಟ್ಟು ಹೋಗುತ್ತವೆ. ರಾಸಾಯನಿಕಗಳಿಲ್ಲದೆ, ಮನೆಯವರ ಆರೋಗ್ಯಕ್ಕೂ ಹಾನಿಯಿಲ್ಲದೆ ಜಿರಳೆ ಸಮಸ್ಯೆಗೆ ಪರಿಹಾರ ಹುಡುಕಬೇಕಾದರೆ ಇಂತಹ ನೈಸರ್ಗಿಕ ವಿಧಾನಗಳು ಸಹಾಯಕರವಾಗುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


