ಹೆಚ್ಚಿನ ಮನೆಗಳಲ್ಲಿ ಕಾಣಿಸಬಹುದಾದ ಸಾಮಾನ್ಯ ಅಡುಗೆಪಾತ್ರೆ ಎಂದರೆ ಸ್ಟೀಲ್ ಪಾತ್ರೆಗಳು. ಅಡುಗೆ ಪದಾರ್ಥ ಸಂಗ್ರಹಿಸಲು ಇದು ಬಹಳ ಸುಲಭವಾಗಿ ಲಭ್ಯವಾಗುವ ವಸ್ತು. ಆದರೆ ಎಲ್ಲವನ್ನೂ ಇದರಲ್ಲಿ ಇಡೋದಲ್ಲ. ಕೆಲವೊಂದು ಆಹಾರ ಪದಾರ್ಥಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಇಡೋದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಕೆಲವು ಆಹಾರಗಳಲ್ಲಿ ಇರುವ ಆಮ್ಲೀಯ ಅಂಶ ಸ್ಟೀಲ್‌ನೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸಿ ಆಹಾರದ ಗುಣಮಟ್ಟವನ್ನು ಹಾಳುಮಾಡುತ್ತದೆ. ಈ ಮೂಲಕ ರುಚಿ ಕುಸಿತ ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯವಿದೆ.
ಮೊಸರು: ಮೊಸರು ನೈಸರ್ಗಿಕ ಆಮ್ಲೀಯತೆಯುಳ್ಳ ಆಹಾರ. ಇದನ್ನು ದೀರ್ಘಕಾಲ ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಮೊಸರಿನ ರುಚಿ ಕೆಡಬಹುದು ಮತ್ತು ಮೊಸರು ಹಾಳಾಗುವ ಸಾಧ್ಯತೆಯೂ ಇರುತ್ತದೆ. ಇನ್ನುಮುಂದೆ ಮೊಸರನ್ನು ಗಾಜಿನ ಅಥವಾ ಸೆರಾಮಿಕ್ ಪಾತ್ರೆಯಲ್ಲಿ ಇಡುವುದು ಉತ್ತಮ.
ಉಪ್ಪಿನಕಾಯಿ: ಉಪ್ಪು, ಹುಳಿ, ಎಣ್ಣೆ ಇರುವ ಉಪ್ಪಿನಕಾಯಿಯನ್ನು ಸ್ಟೀಲ್ ಪಾತ್ರೆಯಲ್ಲಿ ಇಡಬಾರದು. ಇದರಲ್ಲಿ ರಾಸಾಯನಿಕ ಕ್ರಿಯೆ ಸಂಭವಿಸಬಹುದು. ಪರಿಣಾಮವಾಗಿ ಉಪ್ಪಿನಕಾಯಿ ಬೇಗ ಹಾಳಾಗಬಹುದು, ಜೊತೆಗೆ ಪಾತ್ರೆಯ ಮೇಲ್ಮೈ ಕೂಡ ಹಾನಿಯಾಗಬಹುದು.
ನಿಂಬೆ ಹಾಗೂ ಸಿಟ್ರಸ್ ಆಹಾರಗಳು: ನಿಂಬೆ ಅಥವಾ ನಿಂಬೆರಸವಿರುವ ಪದಾರ್ಥಗಳನ್ನು ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಆ ಆಹಾರದ ರುಚಿ ಬದಲಾಗುತ್ತದೆ. ಸಿಟ್ರಸ್‌ನ ಆಮ್ಲೀಯತೆ ಪಾತ್ರೆಯ ಮೇಲ್ಮೈಗೆ ಹಾನಿ ಮಾಡಬಹುದು. ಇವುಗಳನ್ನು ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬಗಳಲ್ಲಿ ಇಡುವುದು ಸುರಕ್ಷಿತ.
ಟೊಮೆಟೊ ಮಿಶ್ರಿತ ಪದಾರ್ಥಗಳು: ಟೊಮೆಟೊ ಕೂಡ ಆಮ್ಲೀಯತೆಯುಳ್ಳ ಆಹಾರವಾಗಿದ್ದು, ಇದನ್ನು ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಅದರ ಪೌಷ್ಟಿಕತೆ ನಾಶವಾಗಬಹುದು. ಹಾಗಾಗಿ ಇವುಗಳನ್ನು ಗಾಜಿನ ಬೌಲ್‌ನಲ್ಲಿ ಇಡುವುದು ಉತ್ತಮ.
ಹಣ್ಣುಗಳು ಮತ್ತು ಸಲಾಡ್‌ಗಳು: ಹಣ್ಣುಗಳಲ್ಲಿರುವ ನೀರಿನ ಅಂಶ ಸ್ಟೀಲ್ ಪಾತ್ರೆಗೆ ಪ್ರತಿಕ್ರಿಯೆ ನೀಡಬಹುದು. ಇದರಿಂದ ಹಣ್ಣುಗಳು ಬೇಗ ಕೆಡುವ ಸಾಧ್ಯತೆ ಇದೆ. ಹಾಗಾಗಿ ಹಣ್ಣು, ಸಲಾಡ್‌ಗಳನ್ನು ಗಾಜು ಅಥವಾ ಸೆರಾಮಿಕ್ ಪಾತ್ರೆಯಲ್ಲಿ ಇಡಬೇಕು.
ಉಪ್ಪು: ಉಪ್ಪು ಲೋಹದೊಂದಿಗೆ ಪ್ರತಿಕ್ರಿಯೆ ನೀಡದಿದ್ದರೂ ದೀರ್ಘಕಾಲ ಸ್ಟೀಲ್ ಡಬ್ಬಲ್ಲಿ ಇಟ್ಟರೆ ತೇವಾಂಶ ಬಿಟ್ಟು ಉಪ್ಪಿನ ಗುಣಮಟ್ಟ ಕುಂದಬಹುದು. ಜೊತೆಗೆ ಪಾತ್ರೆಗೂ ತುಕ್ಕು ಹಿಡಿಯಬಹುದು.
ಹೀಗಾಗಿ ಯಾವ ಆಹಾರವನ್ನೂ ಹೇಗೆ ಸಂಗ್ರಹಿಸಬೇಕು ಎಂಬ ಜ್ಞಾನ ಇದ್ದರೆ, ರುಚಿಯೂ ಉಳಿಯುತ್ತದೆ, ಆರೋಗ್ಯವೂ ಸುರಕ್ಷಿತ.