ಹಾಗಲಕಾಯಿ ಎಂದರೆ ಹಲವರಿಗೆ ಕಹಿಯ ತರಕಾರಿ ಎಂಬ ಭಾವನೆ. ಆರೋಗ್ಯಕ್ಕೆ ಒಳ್ಳೆದು ಅಂತ ಖರೀದಿಸಿ ಮನೆಗೆ ತರ್ತೀವಿ. ಆದರೆ ತಯಾರಿಸುವಾಗ ಕಹಿಯನ್ನು ಕಡಿಮೆ ಮಾಡುವುದೆಂದರೆ ಬಹುತೇಕರಿಗೆ ದೊಡ್ಡ ಸವಾಲು. ಯಾವುದೇ ರೆಸಿಪಿಯಲ್ಲಿ ಹಾಗಲಕಾಯಿ ಹೇರಳವಾಗಿ ಉಪಯೋಗಿಸಬಹುದಾದರೂ ಅದರ ಕಹಿ ಅಂಶದಿಂದ ಅಡುಗೆ ಕಹಿಯಾಗುವ ಅಪಾಯವಿದೆ. ಆದರೆ ಕೆಲ ಸರಳ ಉಪಾಯಗಳನ್ನು ಅನುಸರಿಸಿ ಹಾಗಲಕಾಯಿ ಕಹಿಯನ್ನು ಸುಲಭವಾಗಿ ತಗ್ಗಿಸಬಹುದು.
ಉಪ್ಪು
ಮೊದಲನೆ ವಿಧಾನವಾಗಿರುವುದು ಉಪ್ಪು ಬಳಕೆ. ಸಿಪ್ಪೆ ತೆಗೆದ ಹಾಗಲಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಹೆಚ್ಚು ಉಪ್ಪು ಹಾಕಿ ಸುಮಾರು 20-30 ನಿಮಿಷ ಬಿಡಬೇಕು. ಈ ಅವಧಿಯಲ್ಲಿ ಹೋಳುಗಳಿಂದ ತೇವಾಂಶ ಹೊರ ಬರುವುದರೊಂದಿಗೆ ಕಹಿ ಅಂಶವೂ ಹೊರಗೆ ಬರುತ್ತದೆ. ನಂತರ ಇದನ್ನು ಸರಿಯಾಗಿ 3-4 ಬಾರಿ ತೊಳೆಯಬೇಕು.
ವಿನೆಗರ್ ಮತ್ತು ಸಕ್ಕರೆ
ಮತ್ತೊಂದು ವಿಧಾನವೆಂದರೆ ವಿನೆಗರ್ ಮತ್ತು ಸಕ್ಕರೆ ಉಪಯೋಗಿಸುವುದು. ಒಂದು ಪಾತ್ರೆಯಲ್ಲಿ ನೀರಿಗೆ ಎರಡು ಟೇಬಲ್ ಸ್ಪೂನ್ ಸಕ್ಕರೆ ಹಾಗೂ ಒಂದು ಟೀಸ್ಪೂನ್ ವಿನೆಗರ್ ಸೇರಿಸಿ, ಹಾಗಲಕಾಯಿ ತುಂಡುಗಳನ್ನು ಅದರಲ್ಲಿ 30 ನಿಮಿಷ ನೆನೆಸಿಡಿ. ಈ ರೀತಿ ಮಾಡಿದರೆ ಕಹಿ ಬಹುತೇಕ ಕಡಿಮೆಯಾಗುತ್ತದೆ.
ಬೀಜ ತೆಗೆಯಿರಿ
ಹಾಗಲಕಾಯಿಯ ಬೀಜ ಮತ್ತು ಸಿಪ್ಪೆಯಲ್ಲೇ ಹೆಚ್ಚು ಕಹಿ ಅಂಶವಿರುವುದರಿಂದ, ಅಡುಗೆಗೆ ಮುನ್ನ ಈ ಭಾಗಗಳನ್ನು ತೆಗೆಯುವುದು ಉತ್ತಮ. ಸಿಪ್ಪೆ ತೆಗೆಯುವ ಮೂಲಕ ಬಾಯಿ ಕಹಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಮೊಸರಲ್ಲಿ ನೆನೆಸಿಡಿ
ಇನ್ನೊಂದು ಪರಿಣಾಮಕಾರಿ ಹಾಗೂ ನೈಸರ್ಗಿಕ ವಿಧಾನವೆಂದರೆ ಮೊಸರಿನಲ್ಲಿ ಹಾಗಲಕಾಯಿ ತುಂಡುಗಳನ್ನು ನೆನೆಸುವುದು. ಮೊಸರು ಹಾಗಲಕಾಯಿಯ ಸಿಪ್ಪೆಯ ಮೇಲೆ ಇರುವ ಕಹಿ ಅಂಶವನ್ನು ನೈಸರ್ಗಿಕವಾಗಿ ತಗ್ಗಿಸುತ್ತದೆ. ಸುಮಾರು ಅರ್ಧ ಗಂಟೆ ಮೊಸರಿನಲ್ಲಿ ನೆನೆಸಿ ನಂತರ ತೊಳೆಯಬೇಕು.
ಹೀಗೆ ಕೆಲವೊಂದು ಸಾಮಾನ್ಯ ಗೃಹೋಪಯೋಗಿ ಪದಾರ್ಥಗಳ ಬಳಕೆ ಮೂಲಕ ಹಾಗಲಕಾಯಿ ಕಹಿಯನ್ನು ಕಡಿಮೆ ಮಾಡುವುದು ಸುಲಭ. ಆರೋಗ್ಯಕ್ಕೆ ಪೋಷಕಾಂಶಗಳಿಂದ ಸಮೃದ್ಧವಾದ ಈ ತರಕಾರಿಯನ್ನು ಇನ್ನುಮೇಲೆ ಕಹಿ ಇಲ್ಲದೆ ಅಡುಗೆಗೆ ಬಳಸಬಹುದು.