ಆಹಾರವನ್ನು ಹೆಚ್ಚು ಕಾಲ ರುಚಿಕರವಾಗಿ ಮತ್ತು ಆರೋಗ್ಯಕರವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯ. ಆದರೆ, ನಮ್ಮ ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳ ಆಯ್ಕೆಯೂ ಆಹಾರದ ಗುಣಮಟ್ಟವನ್ನು ನಿರ್ಧರಿಸುತ್ತದೆ. ವಿಶೇಷವಾಗಿ ಸ್ಟೀಲ್ ಪಾತ್ರೆಗಳು ಎಲ್ಲ ಆಹಾರಕ್ಕೂ ಸೂಕ್ತವಲ್ಲ. ಕೆಲವು ಆಹಾರಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಇಟ್ಟರೆ ಅವುಗಳ ರುಚಿ, ಪೋಷಕಾಂಶ ಮತ್ತು ಶೆಲ್ಫ್ ಲೈಫ್ ಹಾಳಾಗಬಹುದು.
ನಿಂಬೆ ಮತ್ತು ಹುಣಸೆಹಣ್ಣಿನ ಆಹಾರ
ಲೆಮನ್ ರೈಸ್, ಹುಣಸೆ ಸಾಂಬಾರ್ ಅಥವಾ ಹುಣಸೆ ಆಧಾರಿತ ಕರಿಗಳನ್ನು ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಸ್ವಲ್ಪ ಲೋಹದ ವಾಸನೆ ಬರುತ್ತದೆ. ಇವುಗಳ ನೈಸರ್ಗಿಕ ರುಚಿ ಕಳೆದುಕೊಳ್ಳುವುದಲ್ಲದೆ ಪೋಷಕಾಂಶಗಳ ಮೇಲೂ ಪರಿಣಾಮ ಬೀರುತ್ತದೆ.
ಮೊಸರು
ಮೊಸರು ಸ್ವಭಾವತಃ ಹುಳಿ ಆಹಾರ. ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಅದು ಇನ್ನಷ್ಟು ಬೇಗ ಹುಳಿಯಾಗುತ್ತದೆ ಮತ್ತು ರುಚಿಯನ್ನೂ ಹಾಳುಮಾಡುತ್ತದೆ. ಗಾಜು ಅಥವಾ ಸೆರಾಮಿಕ್ ಪಾತ್ರೆಗಳು ಇದಕ್ಕೆ ಉತ್ತಮ.
ಉಪ್ಪಿನಕಾಯಿ
ಉಪ್ಪಿನಕಾಯಿಯಲ್ಲಿ ಉಪ್ಪು, ಎಣ್ಣೆ ಮತ್ತು ವಿನೆಗರ್‌ನಂತಹ ಆಮ್ಲೀಯ ಪದಾರ್ಥಗಳು ಇರುತ್ತವೆ. ಇವು ಸ್ಟೀಲ್ ನೊಂದಿಗೆ ಪ್ರತಿಕ್ರಿಯಿಸಿ ಉಪ್ಪಿನಕಾಯಿಯ ರುಚಿ ಬದಲಿಸುವುದಲ್ಲದೆ ಶೀಘ್ರ ಹಾಳಾಗುವಂತೆ ಮಾಡುತ್ತವೆ. ಗಾಜಿನ ಜಾರ್ ಗಳು ಇದಕ್ಕಾಗಿ ಸುರಕ್ಷಿತ.
ಟೊಮೆಟೊ ಆಧಾರಿತ ಗ್ರೇವಿ
ಟೊಮೆಟೊದಲ್ಲಿರುವ ಆಸಿಡ್ ಸ್ಟೀಲ್ ನೊಂದಿಗೆ ಬೆರೆತು ಆಹಾರದ ಗುಣಮಟ್ಟವನ್ನು ಹಾನಿಗೊಳಿಸುತ್ತದೆ. ಪನೀರ್ ಬಟರ್ ಮಸಾಲಾ, ರಾಜ್ಮಾ ಅಥವಾ ಚೋಲೆ ಹೀಗೆ ಟೊಮೆಟೊ ಆಧಾರಿತ ತಿನಿಸುಗಳನ್ನು ಗಾಜು ಅಥವಾ ಸೆರಾಮಿಕ್ ಪಾತ್ರೆಯಲ್ಲಿ ಇಡಬೇಕು.
ಕತ್ತರಿಸಿದ ಹಣ್ಣುಗಳು ಮತ್ತು ಜ್ಯೂಸ್
ಹಣ್ಣುಗಳ ಜ್ಯೂಸ್ ಅಥವಾ ಕಟ್ ಮಾಡಿದ ಹಣ್ಣುಗಳನ್ನು ಸ್ಟೀಲ್ ನಲ್ಲಿ ಇಟ್ಟರೆ ಅವು ಬೇಗನೆ ಮೃದುವಾಗಿ ರುಚಿ ಕಳೆದುಕೊಳ್ಳುತ್ತವೆ. ಇವುಗಳನ್ನು ಗಾಳಿಯಾಡದ ಗಾಜಿನ ಬಾಟಲ್‌ಗಳಲ್ಲಿ ಇಡುವುದು ಉತ್ತಮ.
ಸ್ಟೀಲ್ ಪಾತ್ರೆಗಳು ಒಣ ಪದಾರ್ಥಗಳಿಗೆ ಸೂಕ್ತವಾದರೂ, ಆಮ್ಲೀಯ, ತೇವಾಂಶ ಹಾಗೂ ಹುಳಿ ಆಹಾರಗಳಿಗೆ ಸೂಕ್ತವಲ್ಲ. ಸರಿಯಾದ ಪಾತ್ರೆಗಳನ್ನು ಬಳಸುವುದರಿಂದ ಆಹಾರದ ರುಚಿ, ಪೋಷಕಾಂಶ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.