ಹಳೆ ಕಾಲದಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಸಂದರ್ಭದಿಂದ ಈಗ ನಾವು ಗ್ಯಾಸ್ ಸ್ಟವ್ಗಳ ಕಾಲಕ್ಕೆ ಬಂದಿದ್ದೇವೆ. ಆದರೆ ಈ ಸುಲಭದ ಬಳಕೆಯ ಹಿಂದೆ ಕೆಲವೊಂದು ಅಪಾಯಗಳು ಇರುವುದು ಅಷ್ಟೊಂದು ಹೆಚ್ಚು ಗಮನ ನೀಡದ ವಿಷಯ. ಅಡುಗೆಗೆಯೇ ಕೇಂದ್ರ ಬಿಂದುವಾಗಿರುವ ಮನೆಯ ಅಡಿಗೆಮನೆಯಲ್ಲಿ ಗ್ಯಾಸ್ ಬಳಕೆಯಲ್ಲಿ ಎಚ್ಚರಿಕೆ ಅತ್ಯಂತ ಅವಶ್ಯಕ. ಬಹುಮಂದಿ ಮಹಿಳೆಯರು ಸುಲಭ ಮತ್ತು ತ್ವರಿತ ಅಡುಗೆಗಾಗಿ ವಿವಿಧ ವಸ್ತುಗಳನ್ನು ಗ್ಯಾಸ್ ಸ್ಟವ್ ಪಕ್ಕದಲ್ಲೇ ಇಡುತ್ತಿರುತ್ತಾರೆ. ಆದರೆ ಇವುಗಳಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು.
ಅಡುಗೆ ಎಣ್ಣೆಯ ಡಬ್ಬಿ: ಗ್ಯಾಸ್ ಸ್ಟವ್ ಹತ್ತಿರ ಅಡುಗೆ ಎಣ್ಣೆಯ ಡಬ್ಬಿ ಇಡುವುದು ಎಣ್ಣೆ ಹೆಚ್ಚು ಶಾಖಕ್ಕೆ ಒಳಪಡುವ ಕಾರಣದಿಂದ ಅದರ ಗುಣಮಟ್ಟ ಹಾಳಾಗಬಹುದು. ಇನ್ನು ಕೆಲವೊಮ್ಮೆ ಬೆಂಕಿ ಹತ್ತಿಕೊಳ್ಳುವ ಅಪಾಯವೂ ಇರುತ್ತದೆ. ಎಣ್ಣೆ ಶೇಖರಿಸಲು ಶೀತಸ್ಥಳ ಬಳಸುವುದು ಸೂಕ್ತ.
ಪ್ಲಾಸ್ಟಿಕ್ ವಸ್ತುಗಳು: ಪ್ಲಾಸ್ಟಿಕ್ ಬಿಸಿ ಗಾಳಿಗೆ ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ಲಾಸ್ಟಿಕ್ ಉರಿದು ಬೆಂಕಿ ಹತ್ತುವ ಸಾಧ್ಯತೆ ಇದೆ. ಪ್ಲಾಸ್ಟಿಕ್ ವಸ್ತುಗಳಿಂದ ಗಾಳಿಯಲ್ಲಿ ವಿಷಕಾರಕ ವಾಯುಗಳು ಉತ್ಪತ್ತಿಯಾಗಬಹುದು.
ಮಸಾಲೆ ಪದಾರ್ಥಗಳ ಡಬ್ಬಿಗಳು: ಅಡುಗೆ ಮಾಡಲು ಸುಲಭ ಆಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಮಸಾಲೆ ಪದಾರ್ಥಗಳ ಡಬ್ಬಿಯನ್ನು ಗ್ಯಾಸ್ ಒಲೆಯ ಪಕ್ಕದಲ್ಲಿಯೇ ಇಟ್ಟು ಬಿಡುತ್ತಾರೆ. ಹೀಗೆ ಮಾಡುವುದರಿಂದ ಮಸಾಲೆಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ.
ಕ್ಲೀನಿಂಗ್ ಸ್ಪ್ರೇಗಳು ಅಥವಾ ಇತರ ರಾಸಾಯನಿಕ ವಸ್ತುಗಳು: ಸ್ಪ್ರೇ ಬಾಟಲಿಗಳು ಸ್ಟವ್ ಹತ್ತಿರ ಇಟ್ಟರೆ, ಅವುಗಳಲ್ಲಿನ ದ್ರವ ಬಿಸಿ ತಗುಲಿ ಸಿಡಿಯಬಹುದು. ಇದು ನೇರವಾಗಿ ಬೆಂಕಿ ಹತ್ತಿಕೊಳ್ಳುವಂತಹ ಭಯಂಕರ ಅಪಾಯವನ್ನು ಉಂಟುಮಾಡಬಹುದು.
ಬಟ್ಟೆಗಳು ಮತ್ತು ವಿದ್ಯುತ್ ಉಪಕರಣ: ಅಡುಗೆ ಮಾಡುವಾಗ ಕೈ ಒರೆಸುವ ಬಟ್ಟೆಗಳು ಅಥವಾ ಟವೆಲ್ಗಳು ಹತ್ತಿರವಿದ್ದರೆ, ಬೇಗನೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯಾಗಿ, ವಿದ್ಯುತ್ ಉಪಕರಣಗಳನ್ನು ತುಂಬಾ ಬಿಸಿಯಾಗಿರುವ ಸ್ಥಳಗಳಲ್ಲಿ ಇಡಬಾರದು. ಏಕೆಂದರೆ ಅತಿಯಾದ ಶಾಖವು ವಿದ್ಯುತ್ ಉಪಕರಣಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮತ್ತು ಇದು ಶಾರ್ಟ್ ಸರ್ಕ್ಯುಟ್ಗೆ ಕಾರಣವಾಗಬಹುದು.
ಜೀವನದಲ್ಲಿ ಸುರಕ್ಷತೆಗಿಂತ ಮುಖ್ಯವಾದದ್ದು ಇನ್ನೊಂದು ಇಲ್ಲ. ಅಡುಗೆಮನೆ ದಿನವೂ ಬಳಕೆಯಾಗುವ ಪ್ರಮುಖ ಸ್ಥಳವಾದ್ದರಿಂದ ಇಲ್ಲಿ ಅನುಸರಿಸಬೇಕಾದ ಕೆಲವೊಂದು ಸರಳ ಸುರಕ್ಷತಾ ನಿಯಮಗಳು ನಿಮ್ಮ ಮನೆಯವರೆಲ್ಲರನ್ನು ಅಪಾಯದಿಂದ ದೂರವಿಡಬಹುದು.