ಅಡುಗೆಮನೆಯಲ್ಲಿ ನಾವು ಮಾಡುವ ಪ್ರತಿಯೊಂದು ತಿನಿಸಿಗೂ ರುಚಿಯಷ್ಟೇ ಅಲ್ಲ, ಆರೋಗ್ಯದ ಸ್ಪರ್ಶವೂ ಅಗತ್ಯ. ಭಾರತೀಯ ಅಡುಗೆಯಲ್ಲಿ ಬಳಸುವ ಮಸಾಲೆಗಳು ಕೇವಲ ಸುವಾಸನೆ ಮತ್ತು ರುಚಿಗಾಗಿ ಮಾತ್ರವಲ್ಲ; ಅವುಗಳಲ್ಲಿ ದೇಹಕ್ಕೆ ಹಿತವಾದ ಪೋಷಕ ಗುಣಗಳು ಕೂಡ ಅಡಕವಾಗಿವೆ. ಸರಿಯಾಗಿ ಬಳಸಿದರೆ ಈ ಮಸಾಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಜೀರ್ಣಕ್ರಿಯೆಯನ್ನು ಸುಧಾರಿಸುವವರೆಗೂ ಹಲವಾರು ಪ್ರಯೋಜನಗಳನ್ನು ನೀಡುತ್ತವೆ.
ಹಾಗಾದರೆ ಆರೋಗ್ಯಕರ ಜೀವನಕ್ಕೆ ಅಡುಗೆಮನೆಯಲ್ಲಿ ಇರಲೇಬೇಕಾದ ಪ್ರಮುಖ ಮಸಾಲೆಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.
- ಅರಿಶಿನ: ಅರಿಶಿನ ಅಡುಗೆಮನೆಯಲ್ಲಿ ಇರಲೇಬೇಕಾದ ಗೋಲ್ಡನ್ ಮಸಾಲೆ. ದೇಹದ ಉರಿಯೂತವನ್ನು ಕಡಿಮೆ ಮಾಡುವುದು, ಮೆದುಳು–ಕರುಳು ಆರೋಗ್ಯ ಸುಧಾರಿಸುವುದು ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣ ಇವೆಲ್ಲವೂ ಈ ಒಂದರಲ್ಲಿದೆ! ಪ್ರತಿದಿನದ ತಿನಿಸಿನಲ್ಲಿ ಸ್ವಲ್ಪ ಅರಿಶಿನ ಸೇರಿಸೋದರಿಂದ ದೇಹಕ್ಕೆ ಶಕ್ತಿಯುತ ರಕ್ಷಣೆ ಸಿಗುತ್ತದೆ.
- ಚಕ್ಕೆ: ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಚಕ್ಕೆ ಅಡುಗೆಗೆ ವಿಶಿಷ್ಟ ರುಚಿ ನೀಡುತ್ತದೆ. ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಉಷ್ಣತೆ ಸಮತೋಲನದಲ್ಲಿರಲು ಸಹ ಯೋಗ್ಯ.
- ಜೀರಿಗೆ: ಜೀರಿಗೆ ಕೇವಲ ರುಚಿಗೆ ಮಾತ್ರವಲ್ಲ; ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ರಕ್ತಪರಿಚಲನೆಯನ್ನು ಸುಧಾರಿಸಲು, ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಯೋಗಿ.
- ಶುಂಠಿ: ಶುಂಠಿಯಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಗುಣವಿದೆ. ವಾಕರಿಕೆ, ಜ್ವರ, ಶೀತದ ಸಮಸ್ಯೆಗಳಲ್ಲಿ ಇದು ಸಹಜ ಪರಿಹಾರವಾಗಿ ಕೆಲಸ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶುಂಠಿ ಅತ್ಯುತ್ತಮ.

