ಕರಾವಳಿ ಕಡಲ ಕಿನಾರೆಯಲ್ಲಿ ಗಾಳಿಪಟ ಉತ್ಸವ: ಬಾನಂಗಳದಲ್ಲಿ ಬಾನಾಡಿಗಳ ಜೊತೆ ಬೆರೆತ ಪಟ!

ಹೊಸ ದಿಗಂತ ವರದಿ, ಮಂಗಳೂರು;

ಮಂಗಳೂರು ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಶನಿವಾರ ಮುಸ್ಸಂಜೆ ಸೇರಿದ್ದ ಜನಸ್ತೋಮವನ್ನು ಬಣ್ಣದ ಪಟಗಳು ಮೋಡಿ ಮಾಡಿಬಿಟ್ಟವು. ಒಂದನ್ನೊಂದು ಹಿಂದಿಕ್ಕಿ ವೈಯ್ಯಾರ ಬೀರುತ್ತಾ ಸಾಗಿದ ಬಣ್ಣ ಬಣ್ಣದ ಗಾಳಿಪಟಗಳು ಆಗಸದ ಅಂಗಣದಲ್ಲೊಂದು ರಂಗಿನ ಚಿತ್ತಾರ ಮೂಡಿಸಿದವು. ಚೆಂದ ಚೆಂದದ ಪಟಗಳು ಬಾನ ತುಂಬೆಲ್ಲಾ ಮಿನುಗುತ್ತಿದ್ದರೆ ಬಾನಾಡಿಗಳ ಜೊತೆ ಬೆರೆತಂತೆಯೇ ಭಾಸವಾಗುತ್ತಿತ್ತು. ನೋಡುವ ಕಣ್ಣುಗಳಂತೂ ಕಣ್ಣಾಲಿಗಳನ್ನು ಮುಚ್ಚದೆ ಆ ಸಂಭ್ರಮವನ್ನು ಸವಿದವು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ಸಾರ್ಥಕ್ಯ ಕಂಡಿತು.

ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಶನಿವಾರ, ಭಾನುವಾರ ಆಯೋಜನೆಯಾಗಿರುವ ಗಾಳಿಪಟ ಉತ್ಸವಕ್ಕೆ ಮೊದಲ ದಿನವಾದ ಶನಿವಾರವೇ ಸಾವಿರಾರು ಮಂದಿ ಸಾಕ್ಷಿಯಾದರು. ದೇಶ ವಿದೇಶಗಳ ನೂರಾರು ವೈವಿಧ್ಯಮಯ, ಬಹು ಅಪರೂಪದ ಗಾಳಿಪಟಗಳನ್ನು ನೋಡಿ ಜನರು ಪುಳಕಗೊಂಡರು.

ಗಾಳಿಪಟ ಉತ್ಸವದಲ್ಲಿ ಗ್ರೀಸ್, ಯುಕೆ, ಜರ್ಮನಿ, ಇಂಡೋನೇಷ್ಯಾ, ನೆದರ್ ಲ್ಯಾಂಡ್, ಎಸ್ಟಿನೋವಾ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ನುರಿತ ಗಾಳಿಪಟ ಹಾರಾಟಗಾರರು ಪಾಲ್ಗೊಂಡಿದ್ದಾರೆ. ಅಲ್ಲದೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದಲೂ ಕಲಾವಿದರು ಗಾಳಿಪಟ ಹಾರಿಸಲು ಬಂದಿದ್ದಾರೆ. ಭಾರೀ ಗಾತ್ರದ ಗಾಳಿಪಟಗಳು, ವಿವಿಧ ಪ್ರಾಣಿಗಳ ಆಕಾರದೊಂದಿಗೆ ಮನ ಸೆಳೆಯುತ್ತಿವೆ.

ಎಂಆರ್‌ಪಿಎಲ್ ಪ್ರಾಯೋಜಕತ್ವಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಕಾರದೊಂದಿಗೆ ಟೀಮ್ ಮಂಗಳೂರು ನೇತೃತ್ವದಲ್ಲಿ ನಡೆದ ಎಂಟನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದ್ದು, ಈ ಉತ್ಸವಕ್ಕೆ ಜನತೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!