ಕಿವೀಸ್‌ ಆರ್ಭಟಕ್ಕೆ ಭಾರತ ಶಾಕ್‌! ಬರೀ 46 ರನ್‌ಗೆ ಟೀಂ ಇಂಡಿಯಾ ಆಲೌಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಟೀಂ ಇಂಡಿಯಾ ಕೇವಲ 46 ರನ್​ಗಳಿಗೆ ಆಲೌಟ್ ಆಗಿದೆ.

ಇದು ತವರಿನಲ್ಲಿ ಭಾರತ ತಂಡ ಕಲೆಹಾಕಿದ ಅತೀ ಕಡಿಮೆ ಮೊತ್ತವಾಗಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಭಾರತ ತಂಡ ತವರಿನಲ್ಲಿ 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಕೇವಲ 75 ರನ್​ಗಳಿಗೆ ಆಲೌಟ್ ಆಗಿತ್ತು. ಇದೀಗ 37 ವರ್ಷಗಳ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಹತ್ತು ಓವರ್​ಗಳಲ್ಲೇ ಟೀಮ್ ಇಂಡಿಯಾ ನಿರ್ಧಾರ ತಪ್ಪು ಎಂಬುದನ್ನು ನ್ಯೂಝಿಲೆಂಡ್ ವೇಗಿಗಳು ನಿರೂಪಿಸಿದ್ದರು.

ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (2) ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟಿಮ್ ಸೌಥಿ ನ್ಯೂಝಿಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (0) ಒರೋಕ್ ಎಸೆತದಲ್ಲಿ ಕ್ಯಾಚ್ ನೀಡಿದರು. ಆ ಬಳಿಕ ಬಂದ ಸರ್ಫರಾಝ್ ಖಾನ್ (0) ಮ್ಯಾಟ್ ಹೆನ್ರಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.

ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ 63 ಎಸೆತಗಳನ್ನು ಎದುರಿಸಿ 13 ರನ್ ಕಲೆಹಾಕಿದರು. ಆದರೆ ಒರೋನ್ ಎಸೆತದಲ್ಲಿ ಅಜಾಝ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಜೈಸ್ವಾಲ್ ಇನಿಂಗ್ಸ್​ ಕೂಡ ಅಂತ್ಯಗೊಂಡಿತು.

ಆ ಬಳಿಕ ಬಂದ ಕೆಎಲ್ ರಾಹುಲ್ (0) ಹಾಗೂ ರವೀಂದ್ರ ಜಡೇಜಾ (0) ಸೊನ್ನೆಯೊಂದಿಗೆ ಪೆವಿಲಿಯನ್​ಗೆ ಹಿಂತಿರುಗಿದರು. ಇನ್ನು ರಿಷಭ್ ಪಂತ್ 20 ರನ್ ಬಾರಿಸಿ ಮ್ಯಾಟ್ ಹೆನ್ರಿ ಎಸೆತದಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (0) ಹಾಗೂ ಜಸ್​ಪ್ರೀತ್ ಬುಮ್ರಾ (2) ಔಟಾದರು.

ಕೊನೆಯ ವಿಕೆಟ್​ಗೆ ಜೊತೆಗೂಡಿದ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ 6 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಹೆನ್ರಿ ಎಸೆತದಲ್ಲಿ ಕ್ಯಾಚ್ ನೀಡಿ ಕುಲ್ದೀಪ್ ಯಾದವ್ (2) ಇನಿಂಗ್ಸ್ ಅಂತ್ಯಗೊಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಕೇವಲ 46 ರನ್​ಗಳಿಗೆ ಆಲೌಟ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!