Sunday, November 23, 2025

46 ವರ್ಷಗಳ ಬಳಿಕ ಕಿವೀಸ್ ದಾಖಲೆ! ರೋಹಿತ್ ಶರ್ಮಾ ಹಿಂದಿಕ್ಕಿ ಡೇರಿಲ್ ಮಿಚೆಲ್ ನಂ.1

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿರುವ ಏಕದಿನ ಬ್ಯಾಟರ್‌ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಮಿಚೆಲ್ ಅಗ್ರಸ್ಥಾನಕ್ಕೇರಿದ್ದು, ಇದರೊಂದಿಗೆ ಕಿವೀಸ್ ಕ್ರಿಕೆಟ್‌ನ 46 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿದೆ.

ಮಿಚೆಲ್‌ಗೆ ಅಗ್ರಸ್ಥಾನ, ಕಿವೀಸ್‌ಗೆ ಹೆಮ್ಮೆ!

ಕಳೆದ ನಾಲ್ಕೂವರೆ ದಶಕಗಳಲ್ಲಿ ನ್ಯೂಜಿಲೆಂಡ್‌ನ ಯಾವುದೇ ಬ್ಯಾಟರ್ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿರಲಿಲ್ಲ. ಕೊನೆಯದಾಗಿ 1979 ರಲ್ಲಿ ಗ್ಲೆನ್ ಟರ್ನರ್ ಅಗ್ರಸ್ಥಾನದಲ್ಲಿದ್ದರು. ನಾಥನ್ ಆಸ್ಟ್ಲೆ, ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ ಅವರಂತಹ ದಿಗ್ಗಜರು ಟಾಪ್-3 ನಲ್ಲಿ ಕಾಣಿಸಿಕೊಂಡಿದ್ದರೂ, ಮೊದಲ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿರಲಿಲ್ಲ.

ಆದರೆ, ಈಗ ಬರೋಬ್ಬರಿ 46 ವರ್ಷಗಳ ಬಳಿಕ ಡೇರಿಲ್ ಮಿಚೆಲ್ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಈ ಮೂಲಕ ಅವರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ನ್ಯೂಜಿಲೆಂಡ್‌ನ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತೀಯ ಬ್ಯಾಟರ್‌ಗಳ ಸ್ಥಾನ ಕುಸಿತ

ರೋಹಿತ್ ಶರ್ಮಾ: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿನ ಪ್ರದರ್ಶನದ ನಂತರ ರೋಹಿತ್ ಶರ್ಮಾ ಅವರು ಒಂದು ಸ್ಥಾನ ಕುಸಿತ ಕಂಡಿದ್ದು, ಒಟ್ಟು 781 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ ಅವರು ಅಗ್ರಸ್ಥಾನದಲ್ಲಿದ್ದರು.

ಶುಭ್​ಮನ್ ಗಿಲ್: ಚಾಂಪಿಯನ್ ಟ್ರೋಫಿ ಬಳಿಕ ಅಗ್ರಸ್ಥಾನದಲ್ಲಿದ್ದ ಗಿಲ್, ಆಸ್ಟ್ರೇಲಿಯಾ ಸರಣಿಯಲ್ಲಿನ ವೈಫಲ್ಯದಿಂದಾಗಿ 745 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದರೂ, ವಿರಾಟ್ ಕೊಹ್ಲಿ 725 ಅಂಕಗಳೊಂದಿಗೆ ಐದನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ರಾಹಿಂ ಝದ್ರಾನ್‌ಗೆ ಮೂರನೇ ಸ್ಥಾನ

ಈ ಬಾರಿ ಶ್ರೇಯಾಂಕದಲ್ಲಿ ಭಾರಿ ಜಿಗಿತ ಕಂಡಿರುವ ಅಫ್ಘಾನಿಸ್ತಾನದ ಯುವ ದಾಂಡಿಗ ಇಬ್ರಾಹಿಂ ಝದ್ರಾನ್ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿನ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅವರು 764 ಅಂಕಗಳೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

error: Content is protected !!