ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಂತ್ ರನ್ನು ಕಡೆಗಣಿಸಿ ಉಪನಾಯಕನಾಗಿ ಚೇತೇಶ್ವರ ಪೂಜಾರ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಬಿಸಿಸಿಐ ವಿರುದ್ಧ ಅಭಿಮಾನಿಗಳ ಆಕ್ರೋಶ ಸ್ಫೋಟಗೊಂಡಿದೆ. ಬಿಸಿಸಿಐ ಆಯ್ಕೆ ಮಾನದಂಡಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಗಳು ಬಿಸಿಯೇರಿಸಿಕೊಳ್ಳುತ್ತಿವೆ. ಈ ನಡುವೆ ಹಂಗಾಮಿ ಟೆಸ್ಟ್ ನಾಯಕ ರಾಹುಲ್ ಉಪನಾಯಕನನ್ನು ಆಯ್ಕೆ ಮಾಡುವ ಮಾನದಂಡದ ಬಗ್ಗೆ ಮೌನ ಮುರಿದ್ದಿದ್ದು, ಪಂತ್ ಬದಲು ಪೂಜಾರ ಆಯ್ಕೆಯ ಔಚಿತ್ಯವನ್ನು ವಿವರಿಸಿದ್ದಾರೆ.
ರೋಹಿತ್ ನಾಯಕತ್ವದಲ್ಲಿ ಭವಿಷ್ಯದ ಭಾರತ ನಾಯಕರಾಗಿ ರೂಪಿಸಲ್ಪಡಬೇಕಾದ ಆಟಗಾರರ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರಾಹುಲ್ ಜೊತೆಗೆ ಪಂತ್ ಸಹ ಇದ್ದರು. ಇತರ ಆಟಗಾರರ ಜೊತೆಗೆ ಪಂಥ್ ನಾಯಕತ್ವ ಕೌಶಲ್ಯಗಳ ಪರೀಕ್ಷೆಯೂ ಸಾಗುತ್ತಿತ್ತು. ಆದರೆ ಪೂಜಾರ ರಾಡಾರ್‌ನಲ್ಲಿ ಸಹ ಇರಲಿಲ್ಲ. ಕಳಪೆ ಫಾರ್ಮ್ ನಿಂದ ಒದ್ದಾಡುತ್ತಿರುವ ಅವರನ್ನು ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಕೈಬಿಡಲಾಗಿತ್ತು. ಆ ಬಳಿಕ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕೈಕ್ ಟೆಸ್ಟ್ ನಲ್ಲಿ ನಾಯಕತ್ವ ವಹಿಸಿದ್ದ ಬುಮ್ರಾಗೆ ಪಂತ್ ಉಪನಾಯಕರಾಗಿದ್ದರು.
ಆದರೆ ಏಕಾಏಕಿ ಪಂತ್ ರ ಉಪನಾಯಕ ʼಪಟ್ಟʼ ಕಸಿದುಕೊಳ್ಳಲಾಗಿದೆ. ಭಾನುವಾರ ಬಿಸಿಸಿಐ ತೆಗೆದುಕೊಂಡ ನಿರ್ಧಾರವನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳು “ಹಾಸ್ಯಾಸ್ಪದ” ಎಂದು ಜರೆದಿದ್ದಾರೆ. ಅತ್ತ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ಕೆ.ಎಲ್.ರಾಹುಲ್, ಇಂತಹ ನಿರ್ಧಾರಗಳು ತಂಡದಲ್ಲಿ ಆಟಗಾರನ ಜವಾಬ್ದಾರಿಗಳನ್ನೇನು ಬದಲಾಯಿಸುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಉಪನಾಯಕನನ್ನು ಆಯ್ಕೆ ಮಾಡುವ ಮಾನದಂಡಗಳ ಬಗ್ಗೆ ತನಗೂ ತಿಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
“ಉಪನಾಯಕನ ಆಯ್ಕೆ ಮಾನದಂಡ ಏನೆಂದು ನನಗೂ ತಿಳಿದಿಲ್ಲ, ಬಿಸಿಸಿಐ ಯಾರನ್ನು ಆಯ್ಕೆ ಮಾಡಿದರೂ ನೀವು ನಮ್ಮ ಬೆನ್ನು ತಟ್ಟಿ. ನಾನು ಉಪನಾಯಕನಾಗಿ ಆಯ್ಕೆಯಾದಾಗ ನೀವು ಸಂತೋಷಪಟ್ಟಿದ್ದೀರಿ. ಹಾಗೆ ಮತ್ತೊಬ್ಬರು ಆದಾಗಲೂ ಸಂತೋಷಪಡಿ. ಈ ಹುದ್ದೆ ಬದಲಾವಣೆಯಿಂದ ಹೆಚ್ಚಿನದೇನು ಬದಲಾಗುವುದಿಲ್ಲ. ಅದೆಲ್ಲ ಬಿಸಿಸಿಐಗೆ ಬಿಟ್ಡಟ ವಿಚಾರ. ತಂಡದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ಮತ್ತು ಜವಾಬ್ದಾರಿಯನ್ನು ತಿಳಿದಿದ್ದಾರೆ. ರಿಷಬ್ ಮತ್ತು ಪೂಜಿ(ಪೂಜಾರ) ಇಬ್ಬರೂ ನಮ್ಮ ಅದ್ಭುತ ಆಟಗಾರರಾಗಿದ್ದಾರೆ. ಮತ್ತು ಅನೇಕ ಬಾರಿ ತಂಡವನ್ನು ಗೆಲ್ಲಿಸಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಾವು ತಂಡವಾಗಿ ಮುಂದುವರಿಯುತ್ತೇವೆ ಎಂದು ಅವರು ಚಟ್ಟೋಗ್ರಾಮ್‌ನಲ್ಲಿ ಸೋಮವಾರ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಪ್ರಾರಂಭವಾಗಲಿದ್ದು, ಎರಡನೇ ಟೆಸ್ಟ್ ಡಿಸೆಂಬರ್ 22 ರಂದು ಮೀರ್ಪುರದಲ್ಲಿ ನಡೆಯಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ