ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ.
ತಮ್ಮ ತಾಳ್ಮೆಯ ಆಟದ ಮೂಲಕವೇ ಆಂಗ್ಲ ಬೌಲರ್‌ಗಳನ್ನು ಹೈರಾಣಾಗಿಸಿದ ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ 9ನೇ ಶತಕವನ್ನು ಪೂರೈಸಿದರು.
2023 ರ ನಂತರ ಮೊದಲ ಟೆಸ್ಟ್ ಶತಕ
ಲೀಡ್ಸ್‌ನಲ್ಲಿ ರಾಹುಲ್ ಅವರ ಬ್ಯಾಟ್‌ನಿಂದ ಸಿಡಿದ ಮೊದಲ ಶತಕವಾಗಿರುವುದರಿಂದ ಇದು ಬಹಳ ವಿಶೇಷವಾಗಿದೆ. ಹಾಗೆಯೇ 2023 ರ ನಂತರ ರಾಹುಲ್ ಸಿಡಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಸೆಂಚುರಿಯನ್ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದ ರಾಹುಲ್, ಇದೀಗ ತಮ್ಮ ಶತಕಗಳ ಬರವನ್ನು ನೀಗಿಸಿಕೊಂಡಿದ್ದಾರೆ.
ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿಕಿಟ್ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ ಸ್ಫೋಟಕ ಶತಕ ಸಿಡಿಸಿದ್ದಾರೆ. ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕ್ರೀಸ್ಗೆ ಬಂದ ಪಂತ್, ರಾಹುಲ್ ಜೊತೆಗೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್, ಆ ಬಳಿಕ ತಮ್ಮ ಗೇರ್ ಬದಲಿಸಿ ಉಳಿದ 50 ರನ್ಗಳನ್ನು ಕೇವಲ 47 ಎಸೆತಗಳಲ್ಲಿ ಕಲೆಹಾಕಿ ತಮ್ಮ ಟೆಸ್ಟ್ ವೃತ್ತಿಜೀವನದ 8ನೇ ಶತಕವನ್ನು ಪೂರೈಸಿದರು.