ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ IPL ಹವಾ ಶುರುವಾಗಿದ್ದು, ಈಗಾಗಲೇ ಫ್ರಾಂಚೈಸಿಗಳು ಹರಾಜಿಗೆ ಮುಂಚಿತವಾಗಿ ಆಟಗಾರರನ್ನು ತಂಡದಿಂದ ಬಿಡುಗಡೆಗೊಳಿಸುವ ಕೆಲಸದಲ್ಲಿ ತೊಡಗಿದೆ.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಈ ಬಾರಿ ನಾಯಕ ಕೆ.ಎಲ್ ರಾಹುಲ್ ಅವರನ್ನು ಹರಾಜಿಗೆ ಮುಂಚಿತವಾಗಿ ತಂಡದಿಂದ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಲಕ್ನೋ ಫ್ರಾಂಚೈಸಿ ರಾಕೆಟ್ ವೇಗಿ ಮಯಾಂಕ್ ಯಾದವ್ ಅವರನ್ನು 14 ಕೋಟಿ ರೂ.ಗೆ ರಿಟೇನ್ ಮಾಡಿಕೊಳ್ಳಲು ಮುಂದಾಗಿದ್ದು, ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಮುಂದಿನ ಐಪಿಎಲ್‌ನಲ್ಲಿ ಕನ್ನಡಿಗ ಮತ್ತೆ ಆರ್‌ಸಿಬಿ ಸೇರ್ತಾರೆ ಅನ್ನೋ ಮಾತುಗಳು ಕೇಳಿಬಂದಿವೆ.
2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕನಾಗಿದ್ದ ಕೆ.ಎಲ್ ರಾಹುಲ್ (KL Rahul) ಸತತ 2 ಬಾರಿ ತಂಡವನ್ನು ಪ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು.
2024ರ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕರಾದ ಸಂಜೀವ್ ಗೋಯೆಂಕಾ ರಾಹುಲ್ ವಿರುದ್ಧ ಮೈದಾನದಲ್ಲೇ ರೇಗಾಡಿದ್ದರು. ಈ ವೀಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯಿಂದ ರಾಹುಲ್, ಲಕ್ನೋ ತಂಡದಲ್ಲಿ ಮುಂದುವರಿಯುವ ಆಸಕ್ತಿ ಕಳೆದುಕೊಂಡಿದ್ದು, ಮೆಗಾ ಹರಾಜಿಗೂ ಮುನ್ನ ರಾಹುಲ್ ಆರ್‌ಸಿಬಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.