ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕೆಎಲ್‌ಇ ಸಂಸ್ಥೆ ಸ್ಥಾಪನೆಗೆ ಕಾರಣಿಭೂತರಾದ ಸಪ್ತರ್ಷಿಗಳ ಕನಸು ನನಸು ಮಾಡುವ ದಿಕ್ಕಿನಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಾಗುತ್ತಿದ್ದು, ಸದ್ಯ ಜಗತ್ತಿನಲ್ಲಿ ಮಾದರಿ ಸಂಸ್ಥೆಯಾಗುವಂತೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ 75 ನೇ ಅಮೃತ ಮಹೋತ್ಸವ ಹಾಗೂ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕಾರ ಕೋರೆ ಅವರಿಗೆ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಚಿಂತನೆಯ ಪರವಾದ ವ್ಯಕ್ತಿಯನ್ನು ಕೆಎಲ್‌ಇ ಸಂಸ್ಥೆ ಕಂಡಿದ್ದು, ಅವರ ವಿಚಾರಗಳಿಗೆ ಹಲವಾರು ಬಾರಿ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಯುತ್ತಿದ್ದಾರೆ. ಎಷ್ಟೋ ಜನರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ರಾಜಕೀಯ ಕ್ಷೇತ್ರದಲ್ಲಿ ನನ್ನ ಸಾಧನೆಯೇ ಪ್ರತ್ಯಕ್ಷ ಉದಾಹರಣೆ ಎಂದರು.
ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಕೆಎಲ್‌ಇ ಸಂಸ್ಥೆ ನಾಡಿಗೆ ಕೊಡುಗೆ ನೀಡುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿದೆ. 75 ವರ್ಷ ಪೂರೈಸಿದ ಪ್ರಭಾಕರ ಕೋರೆ ಅವರು ಸದ್ಯ 25 ವರ್ಷದ ಯುವಕರಂತೆ ಇದ್ದಾರೆ. ಅವರ ಶಕ್ತಿ ಹಾಗೂ ಸಂಘಟನೆಯಿಂದ 20 ಇದ್ದ ಸಂಸ್ಥೆಗಳ ಸಂಖ್ಯೆ ಈಗ 300 ಆಗಿವೆ ಎಂದರು.
ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ ಮಾತನಾಡಿ, ದೂರದೃಷ್ಟಿಯಿಂದ ಸಂಸ್ಥೆ ಆರಂಭಿಸಿದ ಸಂಸ್ಥಾಪಕರ ಸಪ್ತರ್ಷಿಗಳ ಆಸೆ ಪ್ರಭಾಕರ ಕೋರೆ ಈಡೇರಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಅಪರವಾದ ಸಾಧನೆ ಮಾಡಿದ ಸಂಸ್ಥೆ ವಿಶ್ವದಲ್ಲಿ ದಾಖಲೆ ಮೂಡಿಸಿದೆ. ಆದರಿಂದ ಪ್ರಭಾಕರ ಕೋರೆ ಅವರು ಸಂಸ್ಥೆಗೆ ಆಜೀವ ಕಾರ್ಯಾಧ್ಯಕ್ಷರಾಗಿರಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಅವರ ಧರ್ಮಪತ್ನಿ ಆಶಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೆಎಲ್‌ಇ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿ ಅಶೋಕ ಶೆಟ್ಟರ, ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನ್ನವಳ್ಳಿ, ಅಧ್ಯಕ್ಷ ಮಹಾತೇಶ ಕೌಜಲಗಿ ಹಾಗೂ ಇತರರಿದ್ದರು.
ದಾನದ ಮೊತ್ತ ಮಹತ್ವವಲ್ಲ: ಕೆಎಲ್‌ಇ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಮೂಲ ಕಾರಣ ದಾನಿಗಳು ಹಾಗೂ ಸಂಸ್ಥೆಯ ನನ್ನ ಕುಟುಂಬದಿಂದ. ದಾನದ ಮೊತ್ತ ಮಹತ್ತವದಲ್ಲ ದಾನ ನೀಡುವ ಮನಸ್ಸು ಮಹತ್ವದಾಗಿದೆ. ಸಮಾಜಕ್ಕೆ ಉತ್ತಮ ಶಿಕ್ಷಣ ನೀಡುವುದುನ್ನು ಮೆಚ್ಚಿ ಶ್ರೀಮಂತರು ಅಷ್ಟೇ ಅಲ್ಲದೇ ಬಡವರು ಸಹ ದಾನ ನೀಡಿದ್ದಾರೆ. ಸಂಸ್ಥೆಯ ಜೊತೆಗೆ ಶಿಕ್ಷಣ ಸೇವೆ ಮುಂದುವರಿಯಲಿದೆ. ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.