ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ತನ್ನ ಬ್ರಾಂಚ್‌ಗಳ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ಕೆಎಂಎಫ್ ನಿರ್ಧರಿಸಿದೆ. ಇತ್ತೀಚೆಗೆ ಕರ್ನಾಟಕದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ ಕೇರಳದಲ್ಲಿ ತನ್ನ ಕೆಲವು ಔಟ್‌ಲೆಟ್‌ಗಳನ್ನು ತೆರೆದಿತ್ತು. ಇದು ನಂದಿನಿ ವರ್ಸಸ್ ಮಿಲ್ಮಾ ವಾಗ್ವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸಿಇಒ ಅವರಿಂದ ಮಾಹಿತಿ ಪಡೆಯಲಾಗಿದೆ ಎಂದು ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರ ಇಲಾಖೆ ಸಚಿವೆ ಜೆ. ಚಿಂಚುರಾಣಿ ಅವರು ಹೇಳಿದ್ದಾರೆ. ʻʻರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿ ಸಿಇಒ ಅವರಿಂದ ತಿಳಿದುಬಂದಿದೆʼʼ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಎಂಎಫ್ ನಿರ್ಧಾರವನ್ನು ಚಿಂಚುರಾಣಿ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಗೆಲುವಿನ ನಂತರ ಕರ್ನಾಟಕದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಿದೆ ಎಂದಿದ್ದಾರೆ.
ಕರ್ನಾಟಕದ ನಂದಿನಿಯ ಹಾಲು ಮತ್ತು ಡೈರಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶಿಸುವ ಬಗ್ಗೆ ಕೇರಳದ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸುವಂತೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ಕೇರಳ ಸರ್ಕಾರ ದೂರು ಸಲ್ಲಿಸಿತ್ತು. ನಂದಿನಿ ಮತ್ತು ಮಿಲ್ಮಾ ಎರಡೂ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿದ್ದು, ಬೇರೆ ರಾಜ್ಯಕ್ಕೆ ಹೋಗುವಾಗ ಆ ರಾಜ್ಯದ ಅನುಮತಿ ಪಡೆಯಬೇಕಿತ್ತು ಎಂದು ಚಿಂಚುರಾಣಿ ಈ ಹಿಂದೆ ಹೇಳಿದ್ದರು.