April 21, 2026
Tuesday, April 21, 2026
spot_img

ಪ್ರಧಾನಿ ಮೋದಿ ಕುರಿತು ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೊಡಗು ಬಿಜೆಪಿ ಕಿಡಿ

ಹೊಸ ದಿಗಂತ ವರದಿ, ಮಡಿಕೇರಿ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಸಂಬೋಧಿಸಿದರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೀಳುಮಟ್ಟದ ರಾಜಕೀಯ ನಡೆ ಖಂಡನೀಯವೆoದು ಕೊಡಗು ಜಿಲ್ಲಾ ಬಿಜೆಪಿಯ ವಕ್ತಾರ ಬಿ.ಕೆ.ಅರುಣ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮಿಳುನಾಡು ಚುನಾವಣಾ ಪ್ರಚಾರದ ಸಂದರ್ಭ ಮಲ್ಲಿಕಾರ್ಜುನ ಖರ್ಗೆ ಅವರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ದೇಶದ ಜನ ಮಾತ್ರವಲ್ಲದೆ ಇಡೀ ವಿಶ್ವವೇ ಮೆಚ್ಚಿಕೊಂಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಲಘುವಾಗಿ ಮಾತನಾಡುವ ಮೂಲಕ ಖರ್ಗೆ ಅವರು ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಜನಸ್ನೇಹಿ ಆಡಳಿತದ ಮೂಲಕ ದೇಶವನ್ನು ಪ್ರಗತಿಪಥದತ್ತ ಸಾಗಿಸಿ ಮೂರು ಬಾರಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಅವರ ವಿರುದ್ಧ ಕಟು ಭಾಷೆಯನ್ನು ಬಳಸುವ ಮೊದಲು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ಖರ್ಗೆ ಅವರು ಮೊದಲು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಹಸವನ್ನು ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಸುಮಾರು 50 ವರ್ಷಗಳ ರಾಜಕೀಯ ಹಿರಿತನವನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯ ಕುರಿತು ಪ್ರಧಾನಮಂತ್ರಿಗಳು ಇತ್ತೀಚೆಗಷ್ಟೇ ಅಧಿವೇಶನದಲ್ಲಿ ಗೌರವದಿಂದ ಮಾತನಾಡಿದ್ದರು. ಆದರೆ ಖರ್ಗೆ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಮೇರು ವ್ಯಕ್ತಿತ್ವದ ಸಜ್ಜನ ನಾಯಕ ಮೋದಿ ಅವರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದಾರೆ. ಇದು ಸರ್ವ ಭಾರತೀಯರಿಗೆ ತೋರಿರುವ ಅಗೌರವವಾಗಿದೆ. ಆದ್ದರಿಂದ ಖರ್ಗೆ ಅವರು ತಕ್ಷಣ ದೇಶದ ಜನತೆಯ ಕ್ಷಮೆ ಯಾಚಿಸಬೇಕೆಂದು ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.

ದೇಶದ ಹಿತವನ್ನು ಕಡೆಗಣಿಸಿ ಭಯೋತ್ಪಾದಕ ಮನೋಸ್ಥಿತಿಗಳಿಗೆ ಬೆಂಬಲ ನೀಡುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ, ಪ್ರಸ್ತುತ ಜನರಿಂದ ತಿರಸ್ಕರಿಸಲ್ಪಟ್ಟು ಅವನತಿಯ ಹಾದಿಯಲ್ಲಿದ್ದರೂ ತನ್ನ ಚಾಳಿಯನ್ನು ಮುಂದುರಿಸಿದೆ ಎಂದು ಆರೋಪಿಸಿರುವ ಅವರು, ಭಾರತ ಕಾಂಗ್ರೆಸ್ ಮುಕ್ತವಾಗುವ ಕಾಲ ದೂರವಿಲ್ಲವೆಂದು ಭವಿಷ್ಯ ನುಡಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !