ರಾಜಸೀಟು ಉದ್ಯಾನವನದಲ್ಲಿ ‘ಕೊಡಗು ಕಾಫಿ ಮೇಳ’ಕ್ಕೆ ಚಾಲನೆ

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಗ್ರೇಟರ್ ರಾಜಸೀಟು ಉದ್ಯಾನವನದಲ್ಲಿ ಶನಿವಾರ ಸಂಜೆ ‘ಕೊಡಗು ಕಾಫಿ ಮೇಳ’ಕ್ಕೆ ಗಣ್ಯರಿಂದ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಕಾಫಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕೊಡಗು ಕಾಫಿ ಮೇಳಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಕಾಫಿ ಬೆಳೆಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ನಿಟ್ಟಿನಲ್ಲಿ ಗ್ರೇಟರ್ ರಾಜಸೀಟು ಉದ್ಯಾನವನದಲ್ಲಿ ‘ಕೊಡಗು ಕಾಫಿ ಮೇಳ’ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಕೃಷಿಕರು ಕಾಫಿ ಮತ್ತು ಕರಿಮೆಣಸು ಕೃಷಿಯಿಂದ ಬದುಕು ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕಾಫಿಯನ್ನು ಸ್ಥಳೀಯವಾಗಿ ಹೆಚ್ಚು ಉಪಯೋಗಿಸುವುದರಿಂದ ಮಾರುಕಟ್ಟೆಯಲ್ಲಿಯೂ ಒಳ್ಳೆಯ ದರ ಸಿಗುತ್ತದೆ ಎಂದು ಅವರು ಹೇಳಿದರು.
ಕಾಫಿ ಬೆಳೆಯಿಂದ ಕಾಫಿ, ಜೊತೆಗೆ ಚಾಕೋಲೇಟ್ ಹಾಗೂ ಕಾಫಿ ವೈನ್ ಹೀಗೆ ಹಲವು ಉತ್ಪನ್ನಗಳಿಗೆ ಕಾಫಿಯನ್ನು ಬಳಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಕೊಡಗು ಕಾಫಿ ಮೇಳವು ಆಕರ್ಷಣೀಯವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ ಎಂದರು.
18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾನ ಮಾಡುವಂತಾಗಲು ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು ಎಂದು ಕೋರಿದರು.
ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಅವರು ಮಾತನಾಡಿ, ಕೊಡಗು ಕಾಫಿಯ ತವರೂರಾಗಿದೆ. ಕಾಫಿ ಜೊತೆಗೆ ಕರಿಮೆಣಸು, ಗೇರು, ಕಿತ್ತಳೆ ಹೀಗೆ ಹಲವು ಉಪ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಕಾಫಿ ಸೇರಿದಂತೆ ಉಪ ಉತ್ಪನ್ನಗಳಿಗೆ ಸರ್ಕಾರದಿಂದ ಸಹಾಯಧನ ದೊರೆತಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಫಿ ಮಂಡಳಿ ಮಾಜಿ ಸದಸ್ಯರಾದ ಸಣ್ಣುವಂಡ ಕಾವೇರಪ್ಪ, ಮೋಹನದಾಸ್, ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಮೋದ್, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!