ಕೊಡಗು: ಖ್ಯಾತ ಸಾಹಿತಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಂಗಳಿಗೊಂದು ಉಪನ್ಯಾಸ- ಕೇಶವ ಕಾಮತ್

ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲೆಯಲ್ಲಿ ಹೆಸರು ಮಾಡಿದ ಖ್ಯಾತ ಸಾಹಿತಿಗಳ ಬದುಕು ಬರಹದ ಕುರಿತು ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ತಿಂಗಳಿಗೊಂದು ಉಪನ್ಯಾಸ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ನುಡಿದರು.
ಸರಕಾರಿ ಪದವಿ ಕಾಲೇಜಿನ ಕನ್ನಡ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನ ಕನ್ನಡ ಸಂಘ ನಡೆಸುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಮತ್ತು ಕನ್ನಡದ ಬಗ್ಗೆ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಅವರಿಂದ ಉಪನ್ಯಾಸ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆಯ ಕುರಿತು ವಿವರಿಸಿದರಲ್ಲದೆ, ಕನ್ನಡ ನಾಡಿನ ಏಕೀಕರಣದ ಸಮಯದಲ್ಲಿ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಮೈಸೂರು ರಾಜ್ಯ ಸ್ಥಾಪನೆಯಾದಲ್ಲಿಂದ ಕನ್ನಡದ ಉಳಿವಿಗಾಗಿ ಗೋಕಾಕ್ ಚಳುವಳಿಯಲ್ಲಿ ಕೊಡಗು ಜಿಲ್ಲೆಯ ನೇತೃತ್ವ ವಹಿಸಿ ಮಾಡಿದ ಹೋರಾಟವನ್ನು ಮನದಟ್ಟು ಮಾಡಿದರು.
ಕನ್ನಡ ಅನ್ನದ ಭಾಷೆಯಾಗಬೇಕು:
ಕನ್ನಡ ದುಡಿಮೆಯ ಭಾಷೆಯಾಗಬೇಕು. ಕನ್ನಡ ಅನ್ನದ ಭಾಷೆಯಾಗಬೇಕು ಆಗ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ ಎಂದ ಅವರು, ಕನ್ನಡ ನಾಡಿನ ಸರ್ವಶ್ರೇಷ್ಠ ಪರಂಪರೆ ಸಂಸ್ಕೃತಿ ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಕಾಲೇಜಿನ ಅಧ್ಯಾಪಕ ವೃಂದ ತೆಗೆದುಕೊಂಡ ಶ್ರಮ ಶ್ಲಾಘನೀಯ ಎಂದರು. ಇಂದಿನ ಯುವ ಪೀಳಿಗೆ ಕನ್ನಡ ಭಾಷೆಯನ್ನು ಉಪಯೋಗಿಸುವತ್ತ ಮನಸ್ಸು ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮದ್ ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ ಎಲ್ಲೆಲ್ಲೂ ಉಸಿರಬೇಕು ನಮ್ಮ ನುಡಿ ಕನ್ನಡ ಸಿರಿ ಕನ್ನಡ ಕಟ್ಟಲಿಕ್ಕೆ ಬರ್ರೀ ನಮ್ಮ ಸಂಗಡ” ಎಂದು ಚಂಪಾ ರವರ ಕವನ ಉದ್ಗರಿಸಿದರು. ನಾವು ನೀವು ಎಲ್ಲರೂ ಸೇರಿ ಕನ್ನಡ ನಾಡಿನ ಉದಯದತ್ತ ಹೆಜ್ಜೆ ಇಡಬೇಕಾದ ದಿನಗಳು ನಮ್ಮ ಮುಂದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಸಂತಕುಮಾರಿ ಮಾತನಾಡಿ, ಹಳ್ಳಿಗಾಡಿನಲ್ಲಿ ಕನ್ನಡ ಸತ್ತಿಲ್ಲ. ಹಳ್ಳಿ ಜನರ ಮನಸ್ಸು ಮತ್ತು ಮಾತಿನಲ್ಲಿ ಕನ್ನಡ ಇದೆ. ಆದರೆ ನಗರ ಪ್ರದೇಶಗಳಲ್ಲಿ ಒತ್ತಡದಿಂದ ಕನ್ನಡ ಭಾಷೆಯ ಉಪಯೋಗ ಕುಂಠಿತಗೊಂಡಿದೆ. ಕನ್ನಡ ಅಳಿದು ಹೋಗಲು ಸಾಧ್ಯವೇ ಇಲ್ಲ. ನಾವು ಹೆಚ್ಚು ಹೆಚ್ಚು ಭಾಷೆಯ ಬಳಕೆ ಮಾಡಿದರೆ ಕನ್ನಡ ನಿರಂತರವಾಗಿ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂಪಿ ಕೇಶವ ಕಾಮತ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಐಕ್ಯೂಎಸ್ಆರ್ ಸಂಚಾಲಕಿ ಡಾ. ಅನುಪಮಾ ಸಭಾಪತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಕನ್ನಡ ಜಾನಪದ ಸ್ವಾಗತ ನೃತ್ಯ ಏರ್ಪಡಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!