ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಪೊಲೀಸ್ ಶ್ವಾನ ದಳದ ‘ಪೃಥ್ವಿ’ ಮಂಗಳವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದೆ.
ಜಿಲ್ಲಾ ಪೊಲೀಸ್ ಘಟಕದಲ್ಲಿ 2017ರ ಅಕ್ಟೋಬರ್’ನಿಂದ ಎಹೆಚ್’ಸಿ ಎಂ.ಆರ್.ಶಿವ ಅವರ ಮಾರ್ಗದರ್ಶನದಲ್ಲಿ ಪೃಥ್ವಿ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸುತ್ತಿತ್ತು.
ಪೃಥ್ವಿ ತಮ್ಮ ಸೇವಾ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಅಪರವಾದ ಕೊಡುಗೆಯನ್ನು ನೀಡಿದ್ದು, ತನ್ನ 8 ವರ್ಷಗಳ ಸೇವಾ ಅವಧಿಯಲ್ಲಿ ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 3 ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 5 ಬಹುಮಾನವನ್ನು ಪಡೆದಿರುತ್ತದೆ.
ಚೆಕ್’ಪೋಸ್ಟ್ಗಳಲ್ಲಿ ಸ್ಫೋಟಕ ವಸ್ತುಗಳ ಸಾಗಾಟದ ಪತ್ತೆ ಕರ್ತವ್ಯ ನಿರ್ವಹಿಸಿದೆಯಲ್ಲದೆ, ಈ ಶ್ವಾನವು ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ವಿಐಪಿ ಮತ್ತು ವಿವಿಐಪಿಗಳ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಹಾಗೂ ಭದ್ರತಾ ಕರ್ತವ್ಯವನ್ನೂ ನಿರ್ವಹಿಸಿದೆ.
ಏರ್ ಶೋ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುವ ಸಂದರ್ಭ ಕರ್ತವ್ಯ ನಿರ್ವಹಿಸಿದ್ದ ಪೃಥ್ವಿಗೆ ರಾಷ್ಟ್ರಪತಿ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ, ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ಪಾಂಡಿಚೇರಿ ಮತ್ತು ಲಕ್ಷದ್ವೀಪಗಳಿಗೆ ಪ್ರಧಾನ ಮಂತ್ರಿಗಳ ಭೇಟಿ ಸಂದರ್ಭ ಸ್ಫೋಟಕ ವಸ್ತುಗಳ ಪತ್ತೆ ಕರ್ತವ್ಯ ನಿರ್ವಹಿಸಿದ ಕೀರ್ತಿಯೂ ಇದೆ.
ಕೊಡಗು ಪೊಲೀಸ್ ಘಟಕದಲ್ಲಿ ಒಟ್ಟು 8 ವರ್ಷ 2 ತಿಂಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ ಮಂಗಳವಾರ ಹೃದಯಾಘತದಿಂದ ಕೊನೆಯುಸಿರೆಳೆದ ಪೃಥ್ವಿಯ ಆತ್ಮಕ್ಕೆ, ಕೊಡಗು ಜಿಲ್ಲಾ ಪೊಲೀಸ್ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಪರವಾಗಿ ಶಾಂತಿಯನ್ನು ಕೋರುವುದರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಂತಿಮ ಗೌರವ ವಂದನೆ ಸಲ್ಲಿಸಿದರು.