ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ವರ್ಷಗಳ ಹಿಂದೆ ರೈಲಿನಲ್ಲಿ ನಡೆದಿದ್ದ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೊನೆಗೂ ಸುಖಾಂತ್ಯ ಕಂಡಿದೆ. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬಳಿ ಚಿನ್ನಾಭರಣ ಕಳುವಾದ ಪ್ರಕರಣವನ್ನು ಆರೋಪಿಯ ಬಂಧನದೊಂದಿಗೆ ಪೊಲೀಸರು ಬಗೆಹರಿಸಿದ್ದಾರೆ.
ಬಂಧಿತ ಆರೋಪಿ ಜಿತೇಂದ್ರ ಕುಮಾರ್ ಉತ್ತರಾಖಂಡದ ನೈನಿತಾಲ್ ಮೂಲದವನು ಆಗಿದ್ದು, ಅಂತಾರಾಜ್ಯ ಮಟ್ಟದಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯಾಗಿದ್ದ.
2018ರ ಜನವರಿಯಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ಪ್ರಯಾಣಿಸುತ್ತಿದ್ದ ವೇಳೆ ಎಸಿ ಕೋಚ್‌ನಲ್ಲಿರುವ ಲೆದರ್ ಬ್ಯಾಗ್‌ನಿಂದ ಚಿನ್ನದ ಸರ, ಉಂಗುರಗಳು, ಗೌರಿಶಂಕರ ರುದ್ರಾಕ್ಷಿ ಪದಕ ಮತ್ತು 1.62 ಲಕ್ಷ ನಗದು ಕಳವಾಗಿದ್ದವು. ಪ್ರಕರಣವನ್ನು ತೀವ್ರವಾಗಿ ತನಿಖೆ ನಡೆಸಿದ ರೈಲ್ವೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಜಿತೇಂದ್ರ ಕುಮಾರ್‌ನಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತನಿಖೆಯಿಂದ ಈತ ಹಿಂದಿನ 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ ಮತ್ತು ಉತ್ತರಾಖಂಡದ ಹಲವು ರೈಲ್ವೆ ವಿಭಾಗಗಳಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿದ್ದವು.
ನ್ಯಾಯಾಂಗ ವಶಕ್ಕೆ ಒಪ್ಪಿಸಲಾದ ಆರೋಪಿ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕರಣಗಳ ಸಂಬಂಧ ತನಿಖೆ ನಡೆಯಲಿದೆ.