ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಉತ್ತರದ ಕೋಗಿಲು ಲೇಔಟ್‌ನಲ್ಲಿ ನಡೆದ ಮನೆಗಳ ತೆರವು ಕಾರ್ಯಾಚರಣೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಹೊರರಾಜ್ಯದ ನಾಯಕರು ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ನಿರಾಶ್ರಿತರ ಪುನರ್ವಸತಿ ವಿಚಾರಕ್ಕೆ ಆದ್ಯತೆ ನೀಡುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಮನೆ ಕಳೆದುಕೊಂಡವರಿಗೆ ತಕ್ಷಣದ ಪರಿಹಾರ ಹಾಗೂ ಶಾಶ್ವತ ವಸತಿ ವ್ಯವಸ್ಥೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಮನೆ ಕಳೆದುಕೊಂಡ ಕುಟುಂಬಗಳು ಕಳೆದ ಹಲವು ದಿನಗಳಿಂದ ತೆರವುಗೊಳಿಸಿದ ಸ್ಥಳದ ಬಳಿಯೇ ತಾರ್ಪಾಲ್ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಚಳಿಯ ನಡುವೆ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕ ವಲಯ ಮತ್ತು ವಿರೋಧ ಪಕ್ಷಗಳಿಂದ ಟೀಕೆಗಳು ಹೆಚ್ಚಾಗಿವೆ.
ಈ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗವೂ ಪ್ರವೇಶಿಸಿದ್ದು, ಅಧ್ಯಕ್ಷ ಶ್ಯಾಮ್ ಭಟ್ ನೇತೃತ್ವದಲ್ಲಿ ಇಂದು ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಯಲಿದೆ. ಈಗಾಗಲೇ ತನಿಖೆಗೆ ಆದೇಶ ನೀಡಿರುವ ಆಯೋಗ, ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ.

