ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಬೆಂಗಳೂರಿನ ಕೋಗಿಲು ಲೇಔಟ್ ಪ್ರದೇಶದಲ್ಲಿ ನಡೆಸಿದ ಮನೆ ಸಮೀಕ್ಷೆಯ ವರದಿಯನ್ನು ಸಂಬಂಧಿತ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿ ಪ್ರಕಾರ, ಪರಿಶೀಲನೆಗೊಳಪಟ್ಟ ಕುಟುಂಬಗಳಲ್ಲಿ ಕೇವಲ 37 ಕುಟುಂಬಗಳು ಮಾತ್ರ ಮೂಲ ಬೆಂಗಳೂರಿನ ನಿವಾಸಿಗಳೆಂದು ಗುರುತಿಸಲಾಗಿದೆ. ಉಳಿದ ಕುಟುಂಬಗಳು ಬೇರೆ ಕಡೆಯಿಂದ ಬಂದು ವಾಸಿಸುತ್ತಿರುವವರು ಎಂಬುದು ದಾಖಲೆ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ.
ಸಮೀಕ್ಷೆ ವೇಳೆ 119 ಮನೆಗಳನ್ನು ಪರಿಶೀಲಿಸಲಾಗಿದ್ದು, ಪ್ರತೀ ಮನೆಯಲ್ಲೂ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಪಡಿತರ ಚೀಟಿ ಸೇರಿದಂತೆ ಐದು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜಿಬಿಎ, ಕಂದಾಯ ಇಲಾಖೆ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಅಂತಿಮ ವರದಿ ನೀಡಿದ್ದಾರೆ.
ಇದನ್ನೂ ಓದಿ: ಚಿಲ್ಲಿ ಗಾರ್ಲಿಕ್ ಮ್ಯಾಗಿ: ಕೇವಲ 10 ನಿಮಿಷದಲ್ಲಿ ರೆಡಿ ಆಗುತ್ತೆ ಸ್ಪೈಸಿ ಮ್ಯಾಜಿಕ್!
ಪರಿಶೀಲನೆಯಲ್ಲಿ 118 ಕುಟುಂಬಗಳಿಗೆ ಆಧಾರ್ ಕಾರ್ಡ್, 102 ಕುಟುಂಬಗಳಿಗೆ ಮತದಾರರ ಗುರುತಿನ ಚೀಟಿ ಮತ್ತು 77 ಕುಟುಂಬಗಳಿಗೆ ರೇಷನ್ ಕಾರ್ಡ್ ಇರುವುದಾಗಿ ತಿಳಿದುಬಂದಿದೆ. ಆದಾಯ ಪ್ರಮಾಣ ಪತ್ರ 63 ಕುಟುಂಬಗಳಿಗೆ ಮತ್ತು ಜಾತಿ ಪ್ರಮಾಣ ಪತ್ರ 56 ಕುಟುಂಬಗಳಿಗೆ ನೀಡಲಾಗಿದೆ.
ಅಕ್ರಮವಾಗಿ ನಿರ್ಮಿಸಲಾದ ಮನೆಗಳನ್ನು ತೆರವುಗೊಳಿಸಿದ ಬಳಿಕ, ಅರ್ಹ ಕುಟುಂಬಗಳಿಗೆ ಬೈಯಪ್ಪನಹಳ್ಳಿ ವಸತಿ ಸಮುಚ್ಚಯದಲ್ಲಿ ಮನೆ ನೀಡಲು ಸರ್ಕಾರ ಮುಂದಾಗಿದೆ. ಅರ್ಹತೆಯ ಆಧಾರದ ಮೇಲೆ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

