ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಅಬ್ಬರಕ್ಕೆ ಟೀಮ್ ಇಂಡಿಯಾ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿದೆ.
ಕೊಹ್ಲಿ ಸಿಡಿಸಿದ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ನೆರವಿನಿಂದ ಭಾರತ 4 ವಿಕೆಟ್ ಗೆಲುವು ದಾಖಲಿಸಿದೆ. 2003ರ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಗೆಲುವಿನ ನಗೆ ಬೀರಿದೆ.
ನ್ಯೂಜಿಲೆಂಡ್ ನೀಡಿದ 273 ರನ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ನಾಯಕ ರೋಹಿತ್ ಶರ್ಮಾ 40 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಗಿಲ್ 26 ರನ್ ಸಿಡಿಸಿ ಔಟಾದರು.
ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೇಲೆ ಜವಾಬ್ದಾರಿ ಹೆಚ್ಚಿತು. ಅಯ್ಯರ್ ಬೌಂಡರಿ ಮೂಲಕವೇ ಅಬ್ಬರಿಸಿದರು. ಆದರೆ 29 ಎಸೆತದಲ್ಲಿ ಶ್ರೇಯಸ್ ಅಯ್ಯರ್ 33 ರನ್ ಸಿಡಿಸಿ ಔಟಾದರು.
ಕೊಹ್ಲಿ ಹಾಗೂ ರಾಹುಲ್ ಜೊತೆಯಾಟದಿಂದ ಭಾರತ ಉತ್ತಮ ಸ್ಥಿತಿ ಕಾಪಾಡಿಕೊಂಡಿತು. ರಾಹುಲ್ 27 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 191 ರನ್‌ಗೆ ಭಾರತ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಇತ್ತ ರವೀಂದ್ರ ಜಡೇಜಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ನಿಂದ ನ್ಯೂಜಿಲೆಂಡ್ ಒತ್ತಡದಲ್ಲಿ ಸಿಲುಕಿತು. ವಿರಾಟ್ ಕೊಹ್ಲಿ 95 ರನ್ ಸಿಡಿಸಿ 5 ರನ್‌ನಿಂದ ಶತಕ ಮಿಸ್ ಮಾಡಿಕೊಂಡರು. ಇತ್ತ ರವೀಂದ್ರ ಜಡೇಜಾ ಅಜೇಯ 39 ರನ್ ಸಿಡಿಸಿದರು. ಈ ಮೂಲಕ ಭಾರತ 48 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.