ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಅಕ್ಟೋಬರ್ 19ರಿಂದ ಆರಂಭವಾಗಲಿದ್ದು, ಈ ಸರಣಿಯ ಮೊದಲು ಮಾಜಿ ಸ್ಪಿನ್ ಲೆಜೆಂಡ್ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಕನಿಷ್ಠ ಎರಡು ಶತಕಗಳನ್ನು ಖಂಡಿತವಾಗಿ ಬಾರಿಸಲಿದ್ದಾರೆ ಎಂದು ಹರ್ಭಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರ್ಭಜನ್ ಅವರ ಪ್ರಕಾರ, ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿ ಯಾರಿಗೂ ಹೋಲಿಕೆಯಲ್ಲದ ಆಟಗಾರ. “ದಯವಿಟ್ಟು ಯಾರೂ ವಿರಾಟ್ ಕೊಹ್ಲಿಯ ಫಿಟ್ನೆಸ್ ಬಗ್ಗೆ ಪ್ರಶ್ನಿಸಬೇಡಿ, ಯಾಕೆಂದರೆ ಈ ವಿಷಯದಲ್ಲಿ ಅವನೇ ಮಾಸ್ಟರ್. ಇಂದಿನ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಫಿಟ್ ಆಗಿರುವ ಆಟಗಾರ ಎಂದರೆ ಅದು ಕೊಹ್ಲಿಯೇ. ಅವನ ಶಿಸ್ತಿನ ಜೀವನಶೈಲಿ ಮತ್ತು ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ,” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇನ್ನು ಕೊಹ್ಲಿಯ ಅಭಿಮಾನಿಗಳೂ ಕೂಡಾ ಅವನನ್ನು ಮತ್ತೆ ಇಂಡಿಯನ್ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ವಿಶೇಷವಾಗಿ ಏಕದಿನ ಕ್ರಿಕೆಟ್ ಕೊಹ್ಲಿಯ ಪ್ರಿಯ ಫಾರ್ಮ್ಯಾಟ್ ಆಗಿದ್ದು, ಅದರಲ್ಲಿ ಅವನಿಗೆ ಇನ್ನೂ ಸಾಕಷ್ಟು ಸಾಧನೆ ಮಾಡಲು ಸಾಧ್ಯತೆಗಳಿವೆ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.
“ಟೆಸ್ಟ್ ಕ್ರಿಕೆಟ್‌ನಿಂದ ಕೊಹ್ಲಿ ನಿವೃತ್ತಿ ಘೋಷಿಸಿದಾಗ ನನಗೆ ಆಶ್ಚರ್ಯವಾಯ್ತು. ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು ಎನ್ನುವ ನಂಬಿಕೆ ನನಗಿತ್ತು. ಅವನಿಗೆ ಎದುರಾಳಿಗಳ ಮೇಲೆ ಒತ್ತಡ ಹೇರುವ ಮತ್ತು ಪೂರ್ತಿ ನಿಯಂತ್ರಣ ಸಾಧಿಸುವ ಶಕ್ತಿ ಇದೆ. ಈಗ ಅವನು ಹೋಗುತ್ತಿರುವುದು ಅವನಿಗೆ ಅತ್ಯಂತ ಪ್ರಿಯವಾದ ನೆಲ — ಆಸ್ಟ್ರೇಲಿಯಾ,” ಎಂದು ಹೇಳಿದ್ದಾರೆ.