January16, 2026
Friday, January 16, 2026
spot_img

ರಾಂಚಿಯಲ್ಲಿ ಕೊಹ್ಲಿ ಸೆಂಚುರಿ ಆಟ: ಆಫ್ರಿಕಾ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಶತಕದಾಟ , ರೋಹಿತ್, ಕೆ ಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ನಿಂದ ಭಾರತ 8 ವಿಕೆಟ್‌ಗೆ 349 ಬೃಹತ್‌ ರನ್‌ ಕಲೆಹಾಕಿ ಸವಾಲೊಡ್ಡಿದೆ.

ತವರಿನ ಅಭಿಮಾನಿಗಳಿಗೆ ಬರಪೂರ ಬ್ಯಾಟಿಂಗ್‌ ಮನರಂಜನೆ ಒದಗಿಸಿದ ಕೊಹ್ಲಿ135 ರನ್‌ ಬಾರಿಸಿ ಮೆರೆದಾಡಿದರು.

ಸತತ 19ನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಆರಂಭಿಕರಾದ ಜೈಸ್ವಾಲ್‌ ಮತ್ತು ರೋಹಿತ್‌ ಉತ್ತಮ ಆರಂಭ ಒದಗಿಸಿದರು. ಆದರೆ ಬೀಸಾಟಕ್ಕೆ ಮುಂದಾಗಿ ಜೈಸ್ವಾಲ್‌ 18ರನ್‌ಗೆ ವಿಕೆಟ್‌ ಕಳೆದುಕೊಂಡರು. ಆ ಬಳಿಕ ಜತೆಯಾದ ವಿರಾಟ್‌ ಮತ್ತು ರೋಹಿತ್‌ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿ ಹರಿಣ ಪಡೆಗಳ ಮೇಲೆ ಸವಾರಿ ನಡೆಸಿದರು.

ಬಿರುಸಿನ ಬ್ಯಾಟಿಂಗ್‌ ನಡೆಸಿದ ರೋಹಿತ್‌ 51 ಎಸೆತಗಳಿಂದ 57 ರನ್‌ ಬಾರಿಸಿದರು. ಇದು ಅವರ 60ನೇ ಅರ್ಧಶತಕ. 3 ಸಿಕ್ಸರ್‌ ಬಾರಿಸಿದ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡರು.

ಕಳೆದ ಆಸೀಸ್‌ ಪ್ರವಾಸದ ಆರಂಭಿಕ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿ ಅಂತಿಮ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ತಮ್ಮ ಹಳೆಯ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದರು.ಬರೋಬ್ಬರಿ 7 ಸಿಕ್ಸರ್‌ ಮತ್ತು 11 ಬೌಂಡರಿ ಸಿಡಿಸಿದ ಕೊಹ್ಲಿ 135ರನ್‌ ಬಾರಿಸಿ ರಿಕಲ್ಟನ್ ಹಿಡಿದ ಡೈವಿಂಗ್‌ ಕ್ಯಾಚ್‌ಗೆ ವಿಕೆಟ್‌ ಕಳೆದುಕೊಂಡರು.

ನಿಧಾನಗತಿಯ ಬ್ಯಾಟಿಂಗ್‌ ನಡೆಸುತ್ತಿದ್ದ ಹಂಗಾಮಿ ನಾಯಕ ಕೆ.ಎಲ್‌ ರಾಹುಲ್‌ ಅವರು ವಿರಾಟ್‌ ಕೊಹ್ಲಿ ವಿಕೆಟ್‌ ಪತನದ ಬಳಿಕ ಚುರುಕಿನ ಬ್ಯಾಟಿಂಗ್‌ಗೆ ಒಗ್ಗಿಕೊಂಡು ಅರ್ಧಶತಕ ಬಾರಿಸಿದರು. ಅವರಿಗೆ ರವೀಂದ್ರ ಜಡೇಜಾ ಉತ್ತಮ ಸಾಥ್‌ ನೀಡಿದರು. 56 ಎಸೆತ ಎದುರಿಸಿದ ರಾಹುಲ್‌ 60(2 ಬೌಂಡರಿ, 3 ಸಿಕ್ಸರ್‌) ರನ್‌ ಬಾರಿಸಿದರು. ಅಂತಿಮ ಒಂದು ಓವರ್‌ ಬಾಕಿ ಇರುವಾಗ ರಿವರ್ಸ್‌ ಸ್ವೀಫ್‌ ಯತ್ನದಲ್ಲಿ ಕೀಪರ್‌ ಡಿ ಕಾಕ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ಜಡೇಜಾ 20 ಎಸೆತಗಳಿಂದ 32 ರನ್‌ ಗಳಿಸಿದರು.

ರಿಷಭ್‌ ಪಂತ್‌ ಬದಲು ಅವಕಾಶ ಪಡೆದ ಋತುರಾಜ್‌ ಗಾಯಕ್ವಾಡ್‌(8) ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಬ್ಯಾಟಿಂಗ್‌ ಬಡ್ತಿ ಪಡೆದು ಬಂದ ವಾಷಿಂಗ್ಟನ್‌ ಸುಂದರ್‌ ಒಂದು ಸಿಕ್ಸರ್‌ಗೆ ಸೀಮಿತವಾಗಿ 13 ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್‌ಮನ್, ನಾಂದ್ರೆ ಬರ್ಗರ್, ಕಾರ್ಬಿನ್ ಬಾಷ್ ಮತ್ತು ಮಾರ್ಕೊ ಜಾನ್ಸೆನ್‌ ತಲಾ ತಲಾ ಎರಡು ವಿಕೆಟ್‌ ಕಿತ್ತರು.

Must Read

error: Content is protected !!