ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 2027ರ ಜನಗಣತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳು ಕೋಲಾರ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ‘ಡಿಜಿಟಲ್ ಜನಗಣತಿ’ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿಯ ಮೊದಲ ಹಂತವಾಗಿ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಗಣತಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಈ ಬಾರಿ ಸಾರ್ವಜನಿಕರು ತಾವೇ ಸ್ವತಃ ಆನ್ಲೈನ್ ಮೂಲಕ ತಮ್ಮ ಮನೆಯ ವಿವರಗಳನ್ನು ದಾಖಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಏ.1 ರಿಂದ 15 ರವರೆಗೆ ಸಾರ್ವಜನಿಕರು ನಿಗದಿತ ಪೋರ್ಟಲ್ಗೆ (www.se.census.gov.in) ಭೇಟಿ ನೀಡಿ ಸುಮಾರು 34 ರಿಂದ 35 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಮ್ಮ ಮನೆಯ ಗಣತಿಯನ್ನು ತಾವೇ ಮಾಡಿಕೊಳ್ಳಬಹುದು. ಏಪ್ರಿಲ್ 16 ರಿಂದ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ಆನ್ಲೈನ್ ಐಡಿ ನೀಡುವ ಮೂಲಕ ಭೌತಿಕ ಗಣತಿಯ ಸಮಯವನ್ನು ಉಳಿಸಬಹುದಾಗಿದೆ. ಜನಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲೆಯನ್ನು ಒಟ್ಟು 3,385 ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದರು.



