ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದ್ದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ಮುಂದುವರೆದಿದ್ದು, ಸರ್ಕಾರಿ ಆಸ್ಪತ್ರೆಯೆ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಆದ್ರೆ ವೈದ್ಯರು ನೀಡಿರುವ ಸಾಮೂಹಿಕ ರಾಜೀನಾಮೆಗೆ ತಿರುಗೇಟು ನೀಡಿರುವ ದೀದಿ ಸರ್ಕಾರ ಯಾವುದೇ ಕಾರಣಕ್ಕೂ ರಿಸಿಗ್ನೇಷನ್ಅನ್ನು ಅಂಗೀಕರಿಸಲಾಗುವುದಿಲ್ಲ. ಯಾರೇ ಆದರೂ ಸರ್ಕಾರದ ನಿಯಮದ ಪ್ರಕಾರ ವೈಯಕ್ತಿಕವಾಗಿ ರಾಜೀನಾಮೆ ನೀಡಬೇಕು ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ, ಸೇವಾ ನಿಯಮಗಳ ಪ್ರಕಾರ ಉದ್ಯೋಗಿಯು ತನ್ನ ರಾಜೀನಾಮೆಯನ್ನು ವೈಯಕ್ತಿಕವಾಗಿ ಕಳುಹಿಸಬೇಕು. ಈ ರೀತಿ ಸಾಮೂಹಿಕವಾಗಿ ಸಹಿ ಹಾಕಿ ಕಳುಹಿಸಿದರೆ ಅದು ರಾಜೀನಾಮೆ ಎನ್ನಿಸಿಕೊಳ್ಳುವುದಿಲ್ಲ. ವೈದ್ಯರು ಕಳುಹಿಸಿರುವ ಪತ್ರಗಳು ನಿರ್ದಿಷ್ಟ ಸಮಸ್ಯೆಗಳನ್ನು ತಿಳಿಸಿಲ್ಲ ಎಂದು ಹೇಳಿದ್ದಾರೆ.
ನ್ಯಾಯಕ್ಕಾಗಿ ಆಗ್ರಹಿಸಿ ಕೆಲವು ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿ ಅದರ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಅನೇಕ ವೈದ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಸವಾಲೆಸೆದಿದ್ದರು.