ಕೊಲ್ಕತ್ತಾ ಮರ್ಡರ್‌ ಕೇಸ್‌: ಶವ ಹಸ್ತಾಂತರ ಮಾಡಿದ 3 ಗಂಟೆಗಳ ಬಳಿಕ ಎಫ್‍ಐಆರ್ ದಾಖಲಾಗಿದ್ದು ಯಾಕೆ? ಸುಪ್ರೀಂ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಫ್‍ಐಆರ್ ತಡವಾಗಿ ದಾಖಲಿಸಿದ್ದಕ್ಕೆ ಪಶ್ಚಿಮ ಬಂಗಾಳ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಚಂದ್ರಚೂಡ್, ನ್ಯಾ.ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ನ್ಯಾ. ಜೆ.ಬಿ ಪರ್ದಿವಾಲಾ ಅವರು ಎಫ್‍ಐಆರ್ ದಾಖಲಿಸಿದವರು ಯಾರು? ಮತ್ತು ಯಾವ ಸಮಯ ಎಂದು ಪ್ರಶ್ನಿಸಿದರು.

ಇದಕ್ಕೆ ವಕೀಲರು ವೈದ್ಯೆಯ ತಂದೆ ದೂರು ನೀಡಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿದೆ. ಬಳಿಕ ಆಸ್ಪತ್ರೆಯ ವೈಸ್ ಪ್ರಿನ್ಸಿಪಾಲ್ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಿಸುವಾಗ ಸಮಯ ರಾತ್ರಿ 11:45 ಆಗಿತ್ತು ಎಂದು ಉತ್ತರಿಸಿದರು.

ಬಳಿಕ ಸಿಜೆಐ ಚಂದ್ರಚೂಡ್ ಅವರು, ಶವವನ್ನು ಅಂತ್ಯಸಂಸ್ಕಾರಕ್ಕೆ ಯಾವಾಗ ಹಸ್ತಾಂತರಿಸಲಾಯಿತು ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲ ತುಷಾರ್ ಮೆಹ್ತಾ ಸುಮಾರು ರಾತ್ರಿ 8:30 ಎಂದು ಉತ್ತರಿಸಿದರು. ಈ ವೇಳೆ ಸಿಜೆಐ, ಎಫ್‍ಐಆರ್ ರಾತ್ರಿ 11:45ಕ್ಕೆ ಆಗಿದೆ ಅದು ಕೂಡ ಹಸ್ತಾಂತರವಾದ 3 ಗಂಟೆಗಳ ನಂತರ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ವಿಚಾರಣೆ ವೇಳೆ, ನ್ಯಾಯಾಲಯ ಆಸ್ಪತ್ರೆಯ ಮಹಿಳಾ ವೈದ್ಯರು, ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ನಮಗೆ ಕಳವಳವಿದೆ. ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇರಬೇಕು. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತವಾಗಿರಬೇಕು. ಸುರಕ್ಷಿತ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಸುರಕ್ಷಿತವಾಗಿಲ್ಲ ಎಂದಾದರೆ ಸಂವಿಧಾನಕ್ಕೆ ಅರ್ಥವೇನು ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!