March 25, 2026
Wednesday, March 25, 2026
spot_img

ನಾಳೆ ಕೊಪ್ಪಳ-ಭಾಗ್ಯನಗರ ಬಂದ್ ಗೆ ಕರೆ: ಶಾಲೆಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ (ಎಕ್ಸ್‌-ಇಂಡಿಯಾ ಸ್ಟೀಲ್ಸ್ ಲಿಮಿಟೆಡ್) ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ನಾಳೆ (ಫೆಬ್ರವರಿ 24) ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ‘ಸ್ವಯಂಪ್ರೇರಿತ ಬಂದ್’ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಹೀಗಾಗಿ, ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವು ನಾಳೆ ಜಿಲ್ಲಾ ಕೇಂದ್ರದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಇನ್ನು ಕೊಪ್ಪಳ ವಿಶ್ವವಿದ್ಯಾಲಯವು ನಾಳೆ ನಡೆಯಬೇಕಿದ್ದ ಸ್ನಾತಕೋತ್ತರ (PG) ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಅಧಿಕೃತ ಆದೇಶ ಹೊರಡಿಸಿದೆ. ಬಂದ್ ತೀವ್ರತೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವರ್ಷ ಫೆಬ್ರವರಿ 24 ರಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಅಂದು ಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಾರ್ಖಾನೆಯನ್ನು ಶಾಶ್ವತವಾಗಿ ನಿಲ್ಲಿಸಲು ಗಡುವು ನೀಡಿದ್ದರು. ಆದರೆ, ಈವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ಕಾರಣ, ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈಗ ಒಂದು ವರ್ಷ ತುಂಬಿದ ನೆನಪಿಗಾಗಿ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ಬಂದ್ ಮಾಡಲಿದ್ದಾರೆ.

ಈ ಹೋರಾಟಕ್ಕೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು ಹಾಗೂ ಹಿರಿಯ ಪರಿಸರ ಹೋರಾಟಗಾರ ಎ.ಟಿ. ರಾಮಸ್ವಾಮಿ ಅವರು ಭಾಗವಹಿಸಲಿದ್ದಾರೆ.

ವಕೀಲರ ಸಂಘ, ವರ್ತಕರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಈ ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದ್ದು, ಕೊಪ್ಪಳ ಜಿಲ್ಲಾ ಕೇಂದ್ರ ನಾಳೆ ಸ್ತಬ್ಧಗೊಳ್ಳುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !