ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಎಂದರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಭಕ್ತರ ನಿಸ್ವಾರ್ಥ ಸೇವೆ ಮತ್ತು ಶ್ರದ್ಧೆಯ ಪ್ರತಿಬಿಂಬ. ಈ ಬಾರಿ ಜಾತ್ರೆ ಭಕ್ತರ ಅಪಾರ ಸ್ಪಂದನೆಯೊಂದಿಗೆ ಹೊಸ ದಾಖಲೆಗಳನ್ನು ಬರೆದಿದ್ದು, ಮಠದ ಆವರಣವೇ ಭಕ್ತಿಭಾವದಿಂದ ತುಂಬಿಹೋಗಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಗವಿಸಿದ್ದಪ್ಪನ ದರ್ಶನ ಪಡೆದು ಜಾತ್ರೆಗೆ ಸಾಕ್ಷಿಯಾದರು.
ಜನವರಿ 5, 2026ರಂದು ನಡೆದ ರಥೋತ್ಸವಕ್ಕೆ ಆರು ಲಕ್ಷಕ್ಕೂ ಹೆಚ್ಚು ಭಕ್ತರು ಹಾಜರಾಗಿ ಸಂಭ್ರಮಿಸಿದರು. ಕಳೆದ ನಾಲ್ಕು ದಿನಗಳಲ್ಲಿ ಗವಿಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಗದ್ದುಗೆ ದರ್ಶನ ಹಾಗೂ ಶ್ರೀಗಳ ಆಶೀರ್ವಾದ ಪಡೆದವರ ಸಂಖ್ಯೆ 16ರಿಂದ 17 ಲಕ್ಷದವರೆಗೆ ತಲುಪಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Rice series 2 | ಟ್ರಡೀಷನಲ್ ಎಳ್ಳು ಪುಳಿಯೊಗರೆ ಮಾಡೋದು ಹೇಗೆ?
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಮಹಾದಾಸೋಹದಲ್ಲಿ ಈ ಬಾರಿ ಭಕ್ತರಿಗಾಗಿ ವಿಶೇಷ ಸಿಹಿ ತಿನಿಸುಗಳನ್ನು ಸಮರ್ಪಿಸಲಾಗಿದೆ. ಅಜ್ಜನ ಜಾತ್ರೆಗೆ ಸಾಂಪ್ರದಾಯಿಕ ರೊಟ್ಟಿ, ಪಲ್ಯ, ಪುಡಿಗಳು, ಚಟ್ನಿ ಹಾಗೂ ವಿವಿಧ ಉಪ್ಪಿನಕಾಯಿಗಳು ಭಕ್ತರಿಗೆ ಪ್ರಸಾದವಾಗಿ ವಿತರಿಸಲ್ಪಟ್ಟಿವೆ. ಭಕ್ತರು ಸ್ವಯಂಪ್ರೇರಿತರಾಗಿ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ಅರ್ಪಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮಹಾದಾಸೋಹಕ್ಕಾಗಿ 19 ಲಕ್ಷ ರೊಟ್ಟಿ, 175 ಕ್ವಿಂಟಲ್ ಮೈಸೂರು ಪಾಕ್, 62 ಕ್ವಿಂಟಲ್ ಶೇಂಗಾ ಹೋಳಿಗೆ, 155 ಕ್ವಿಂಟಲ್ ಸೋನ್ ಪಾಪಡಿ ಸೇರಿದಂತೆ ಅನೇಕ ಸಿಹಿ ಮತ್ತು ಖಾರ ತಿನಿಸುಗಳು ಮಠಕ್ಕೆ ಬಂದಿವೆ. ಮಹಾಪ್ರಸಾದ ಜನವರಿ 18ರವರೆಗೆ ನಡೆಯಲಿದ್ದು, ಅಕ್ಕಿ, ಬೇಳೆ, ಎಣ್ಣೆ ಹಾಗೂ ತರಕಾರಿಗಳ ದಾನ ಲೆಕ್ಕಕ್ಕೆ ಸಿಗದಷ್ಟಿದೆ. ಕೊಪ್ಪಳ ಜಾತ್ರೆ ಎಂದರೆ ಭಕ್ತರೇ ನಡೆಸುವ ಜಾತ್ರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

