ತುಳುವ ನೆಲದ ಕಥೆ ಸಾರಿದ‌ ಕೊರಮ್ಮ….

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುರೇಶ್ ಡಿ. ಪಳ್ಳಿ

ಇದು, ಈ ನೆಲದ ಕಥೆ. ಇಲ್ಲಿನ ಸಂಸ್ಕೃತಿ, ಭಾಷಾ ಸೊಗಡಿನೊಂದಿಗೆ ಮಾನವೀಯತೆ ಮೆರೆಸಿದ ಬಂಧುತ್ವದ ಕಥೆ. ಮಾನವೀಯ ಮೌಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ ಸಾಗುವ ‘ಕೊರಮ್ಮ’ ಚಿತ್ರ ನಿಜಕ್ಕೂ ಗೆದ್ದಿದೆ. ತುಳುನಾಡಿನ ಜನತೆ ಈ ಸಿನೆಮಾವನ್ನು ಮನಸಾರೆ ಒಪ್ಪುವುದರಲ್ಲಿ ಎರಡು ಮಾತಿಲ್ಲ.

ಹಳೆಯ ತಲೆಮಾರಿನ ಬದುಕಿನ ಚಿತ್ರಣವನ್ನು ಕುತೂಹಲದಿಂದ ನೋಡುವಂತೆ ಮಾಡುವ ಅದ್ಭುತ ಕಥಾ ಹಂದರವಿದೆ. ಅಂದಿನ ಜೀವನಪದ್ಧತಿ, ರೀತಿ ರಿವಾಜುಗಳನ್ನು ಕಟ್ಟಿಕೊಡುವಲ್ಲಿ ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾದ ‘ಕೊರಮ್ಮ’ ಯಶಸ್ವಿಯಾಗಿದೆ. ಜಾತಿ ಧರ್ಮದ ಮೇಲಾಟದಲ್ಲಿ ಯುವಜನತೆ ಸಂಬಂಧಗಳನ್ನು ಕಡಿದುಕೊಂಡು ದೂರಾಗಬಾರದು, ಸಮಾಜದೊಂದಿಗೆ ಪರಸ್ಪರ ಕೊಂಡಿಯಾಗಿ ಮುನ್ನಡೆಯಬೇಕು. ಮೌಲ್ಯಗಳನ್ನು ಆಧರಿಸಬೇಕು ಎಂಬ ಸೂಚ್ಯ ಸಂದೇಶವನ್ನು ನೀಡುವಲ್ಲಿ ಕೊರಮ್ಮ ಯಶಸ್ವಿ ಹೆಜ್ಜೆ ಇಟ್ಟಿದೆ. ಮಾನವೀಯ ಮೌಲ್ಯ, ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಖ್ಯಾತ ನಿರ್ದೇಶಕ ಶಿವಧ್ವಜ್ ಶೆಟ್ಟಿ ಗೆದ್ದಿದ್ದಾರೆ. ಅವರ ವಿನೂತನ ಕಲ್ಪನೆಗೆ ಹ್ಯಾಟ್ಸಾಪ್ ಎನ್ನಲೇಬೇಕು. 70-80ರ ದಶಕದಲ್ಲಿ ಹಳ್ಳಿಯ ಬದುಕು ಹೇಗಿತ್ತು ಎಂಬುದನ್ನು ಪ್ರೇಕ್ಷಕರ ಮುಂದಿಡುವುದರೊಂದಿಗೆ ಅಲ್ಲೊಂದು ಮಾನವೀಯತೆಯ ಗೆರೆ ಎಳೆದಿದ್ದಾರೆ. ಇಲ್ಲೇ ‘ಕೊರಮ್ಮ’ನಿಗೆ ಹೆಚ್ಚು ತೂಕ ಬಂದಿರುವುದು. ಪ್ರೇಕ್ಷಕರ ಪಲ್ಸ್‌ನ್ನು ನಿರ್ದೇಶಕ ಮೀಟಿದ್ದಾರೆ! ಈ ಮೂಲಕ ಸಿನಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ನಮ್ಮದೇ ಊರಿದು…ಹಳ್ಳಿ ಮನೆಯಲ್ಲಿ ನಾವಿದ್ದೇವೆ ಎಂಬ ಭಾವ ಸೃಷ್ಟಿಸುವ ಈ ಚಿತ್ರವನ್ನು ತುಳುವರಂತೂ ಮಿಸ್ ಮಾಡದೆ ನೋಡಲೇಬೇಕು. ಚಿತ್ರದಲ್ಲಿ ಬಳಸಿದ ಸಾಂಪ್ರದಾಯಿಕ ಪರಿಕರಗಳು, ಅಪ್ಪಟ ತುಳು ಭಾಷೆಯ ಪದಗಳ ಬಳಕೆ ಸಿನೆಮಾಕ್ಕೆ ಘನತೆ ತಂದಿದೆ. ಇಲ್ಲಿ ಬಳಸಿದ ಭಾಷಾ ಶೈಲಿ ತುಳುವರಲ್ಲಿ ತಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಿಸುತ್ತದೆ.
ಇಂದಿನ ಜಂಜಾಟದ ಬದುಕಿನ ಧಾವಂತದಲ್ಲಿ ನಾವೇನೋ ಕಳೆದುಕೊಳ್ಳುತ್ತಿದ್ದೇವೆ, ಹಾಗಾಗಬಾರದು. ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಎಚ್ಚರಿಸುವುದರೊಂದಿಗೆ ಏಕತೆ ಸಾರುವ ಕೆಲಸವನ್ನು ಕಥೆ-ಚಿತ್ರಕಥೆ ಹೆಣೆದಿರುವ ನಿರ್ದೇಶಕರು ಮುತುವರ್ಜಿಯಿಂದ ಮಾಡಿದ್ದಾರೆ. ಅಲ್ಲೇ ಅವರು ಗೆದ್ದಿರುವುದು ಕೂಡ.

‘ಕೊರಮ್ಮ’ ಯಾಕೆ ನೋಡಬೇಕು?
‘ಕೊರಮ್ಮ’ದಲ್ಲಿ ಹೊಡಿ ಬಡಿ ಹೊಡೆದಾಟವಿಲ್ಲ. ರಾಶಿ ರಾಶಿ ಪಾತ್ರಗಳ ತುರುಕುವಿಕೆಯಿಲ್ಲ…ಆದರೆ ಸದಭಿರುಚಿಯುಳ್ಳ ಪ್ರೇಕ್ಷಕರಿಗೆ ಏನೆಲ್ಲಾ ಬೇಕೋ ಅದೆಲ್ಲವೂ ಇದೆ. ಇಂಪಾದ ಹಿನ್ನೆಲೆಯ ಸಂಗೀತವೂ ಜೊತೆಗಿದೆ. ‘ಕೊರಮ್ಮ …ಎ ಹ್ಯೂಮನ್’ ಎನ್ನುವ ಟೈಟಲ್‌ನೊಂದಿಗೆ ಆರಂಭದಲ್ಲಿಯೇ ಮಾನವೀಯತೆಯ ಎಳೆಯುಳ್ಳ ಚಿತ್ರ ಎಂಬುದನ್ನು ಸೂಚ್ಯವಾಗಿಯೇ ಹೇಳಲಾಗಿದೆ. ಒಂದಂತದಲ್ಲಿ ಕಾಂತಾರವನ್ನು ನೆನಪಿಸುವ ಈ ಚಿತ್ರ ಹಳ್ಳಿಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಸುರೇಶ್ ಬೈರಸಂದ್ರ ಅವರ ಛಾಯಾಗ್ರಹಣ ಅತ್ಯದ್ಭುತ ಕೆಲಸ ಮಾಡಿದೆ. ತುಳುನಾಡ ಸಂಸ್ಕೃತಿಯನ್ನು ಪಡಿಮೂಡಿಸುವುದರೊಂದಿಗೆ ಇಡೀ ಹಳ್ಳಿಯ ಬದುಕನ್ನು ವಿಶಿಷ್ಟ ರೀತಿಯಲ್ಲಿ ಫ್ರೇಮ್‌ನೊಳಗೆ ತಂದು ಪ್ರೇಕ್ಷಕರ ಮುಂದಿಡುವಲ್ಲಿ ಚಿತ್ರ ತಂಡ ಯಶ ಕಂಡಿದೆ. ನಗರೀಕರಣಕ್ಕೆ ಒಗ್ಗಿಕೊಂಡು ಕೂತವರೊಮ್ಮೆ ಈ ಚಿತ್ರವನ್ನು ನೋಡಲೇಬೇಕು. ಹಳ್ಳಿಯ ಸೊಗಸು, ಹಚ್ಚಹಸುರಿನಿಂದ ಕಂಗೊಳಿಸುವ ಹಳ್ಳಿಯ ರಮಣೀಯ ನೋಟಗಳು ಕ್ಯಾಮೆರಾದೊಳಗೆ ಯಥಾವತ್ ಸೆರೆಯಾಗುವಂತೆ ಮಾಡಿರುವಲ್ಲಿ ಸುರೇಶ್ ಬೈರಸಂದ್ರ ಅವರ ಕೈಚಳಕವಿದೆ.

ಕೊರಮ್ಮ ಗೆದ್ದಿದ್ದಾನೆ…
ಹೌದು, ಕೊರಮ್ಮ ಗೆದ್ದಿದ್ದಾನೆ. ಇದು ಚಿತ್ರಮಂದಿರದಿಂದ ಹೊರಬಂದ ಪ್ರತಿಯೊಬ್ಬರ ಬಾಯಿಂದ ಹೊರಬಂದ ಮೊದಲ ಮಾತು. ಇಡೀ ಚಿತ್ರದಲ್ಲಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುವುದು ಕೊರಮ್ಮನ ನೈಜ ನಟನೆ. ವಾವ್ಹ್! ಎಂತಹ ಪಾತ್ರ ನಿರ್ವಹಣೆ ಎಂದು ಕೊರಮ್ಮನ ಬಗ್ಗೆ ಮಾತನಾಡಿದವರೇ ಅತ್ಯಧಿಕ ಮಂದಿ. ಕೊರಮ್ಮನ ಪಾತ್ರ ನಿರ್ವಹಿಸಿದ ಯುವನಟ ಮೋಹನ್ ಶೇಣಿಯವರು ಚಿತ್ರದ ಹೈಲೈಟ್ಸ್. ಆರಂಭದಿಂದ ಕೊನೆಯವರೆಗೆ ಇವರು ಸಹಜತೆಯನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಇಡೀ ಚಿತ್ರ ಕೊರಮ್ಮನ ಸುತ್ತಲೇ ಗಿರಕಿ ಹೊಡೆಯುತ್ತಾ ಜೀವನ ಮೌಲ್ಯ ಸಾರುತ್ತಾ ಸಾಗುತ್ತದೆ. ಕಥೆಯನ್ನು ಅದ್ಭುತವಾಗಿ ಹೆಣೆದಿದ್ದಾರೆ ನಿರ್ದೇಶಕ ಶಿವಧ್ವಜ್ ಶೆಟ್ಟಿ.

ಜೀವಂತಿಕೆ ಉಳಿಸಿಕೊಂಡ ಪಾತ್ರಗಳು
ಮಂಜಯ್ಯ ಹೆಗ್ಡೆಯಾಗಿ ಕಾಣಿಸಿಕೊಳ್ಳುವ ಗುರುಪ್ರಸಾದ್ ಹೆಗ್ಡೆ, ಆತನ ಪತ್ನಿಯಾಗಿ ನಟಿಸಿರುವ ರೂಪಶ್ರೀ ವರ್ಕಾಡಿ ಅವರ ಮನಮುಟ್ಟುವ ನಟನೆ ಪ್ರೇಕ್ಷಕರ ಮನದಲ್ಲಿ ಉಳಿದುಬಿಡುತ್ತದೆ. ಪಾತ್ರದೊಳಗೆ ಪರಾಕಾಯಪ್ರವೇಶ ಮಾಡುವ ಮೂಲಕ ಇವರುಗಳು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುತ್ತಿನ ಮನೆಯ ಯಜಮಾನನ ಗತ್ತು ಗೈರತ್ತನ್ನು ಗುರುಪ್ರಸಾದರಲ್ಲಿ ಕಾಣಬಹುದು.

ಇನ್ನು, ಶಿವಪ್ಪರ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಮೇರು ಕಲಾವಿದ ಲಕ್ಷ್ಮಣ ಕುಮಾರ್ ಮಲ್ಲೂರು ತಮ್ಮ ನೈಜ ನಟನೆಯ ಮೂಲಕವೇ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಮಂಜಯ್ಯ ಹೆಗ್ಡೆಯ ಮಗನಾಗಿ ಕಾಣಿಸಿಕೊಂಡಿರುವ ಜಿನಪ್ರಸಾದ್, ಕೊರಮ್ಮನ ಪತ್ನಿಯಾಗಿ ಕಾಣಿಸಿಕೊಳ್ಳುವ ಬಿಂದು ರಕ್ಷಿದಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾರಾಗಣದಲ್ಲಿರುವ ದಿವ್ಯಶ್ರೀ ನಾಯಕ್, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡುರಸ್ತೆ ಮುಂತಾದವರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಚಿತ್ರ ಎಲ್ಲೂ ಕೈ ಜಾರದಂತೆ ಪ್ರತಿಯೊಬ್ಬರೂ ಎಚ್ಚರವಹಿಸಿದ್ದಾರೆ. ಆದ್ದರಿಂದಲೇ ಚಿತ್ರ ಜೀವಂತಿಕೆ ಉಳಿಸಿಕೊಂಡಿದೆ. ನಿರ್ಮಾಪಕರಾದ ಅಡ್ಯಾರು ಮಾಧವ ನಾಯ್ಕ್, ಈಶ್ವರಿದಾಸ್ ಶೆಟ್ಟಿ, ರಾಜೇಶ್ವರಿ ರೈ ಇವರುಗಳು ಧೈರ್ಯವಾಗಿ ಮತ್ತೊಂದು ಚಿತ್ರಕ್ಕೆ ಕೈ ಹಾಕಬಹುದು ಎಂಬುದನ್ನು ಈ ಚಿತ್ರ ಜನಮೆಚ್ಚುಗೆ ಪಡೆಯುವ ಮೂಲಕ ಸಾಕ್ಷ್ಯೀಕರಿಸಬಲ್ಲುದು ಎಂಬುದರಲ್ಲಿ ಎರಡು ಮಾತಿಲ್ಲ.

ಶಿನೋಯ್ ಎ.ಜೋಸೆಫ್ ಅವರ ಇಂಪಿನ ಸಂಗೀತ ಈ ಚಿತ್ರಕ್ಕಿದೆ. ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್ ನೋಣವಿನಕೆರೆ ಒದಗಿಸಿದ್ದಾರೆ. ನಿರ್ಮಾಣ-ನಿರ್ವಹಣೆಯನ್ನು ವೀರೇಶ್ ಎಸ್. ಪಿ ಹೊತ್ತುಕೊಂಡಿದ್ದಾರೆ. ಹಂಚಿಕೆದಾರರು ಸಿನಿ ಗ್ಯಾಲಕ್ಸಿಯ ದೀಪಕ್ ಹಂಚಿಕೆದಾರರಾಗಿದ್ದಾರೆ. ಇವೆರ್‍ಲರ ಶ್ರಮದಿಂದಾಗಿ ‘ಕೊರಮ್ಮ’ ಗೆದ್ದಿದೆ ಎನ್ನಲಡ್ಡಿಯಿಲ್ಲ.

ಪ್ರಾದೇಶಿಕ ಚಿತ್ರಗಳು ಗೆಲ್ಲಬೇಕು
ಉತ್ತಮ ಸಿನೆಮಾವನ್ನು ನೀಡಿದರೆ ಖಂಡಿತಾ ಜನತೆ ಒಪ್ಪಿಕೊಳ್ಳುತ್ತಾರೆ. ಕೊರಮ್ಮದಲ್ಲಿ ತುಳುವರ ಹಿಂದಿನ ಬದುಕನ್ನೇ ಪ್ರಧಾನವಾಗಿಸಿ ತೋರಿಸಲಾಗಿದೆ. ಚಿತ್ರದಲ್ಲಿ ಬಳಸಿದ ಪ್ರತಿಯೊಂದು ಪರಿಕರಗಳು ಆಕಾಲದಲ್ಲಿ ಬಳಸಿರುವಂತದ್ದು.
‘ಕೊರಮ್ಮ’ ಒಳಗೊಂಡ ಉತ್ತಮ ಕಥೆ, ಚಿತ್ರಕಥೆ, ಉತ್ತಮ ಛಾಯಾಗ್ರಹಣ, ಕಲಾವಿದರ ಅದ್ಭುತ ನಟನೆ, ಉತ್ತಮ ಸಂಗೀತ ಈ ಪಂಚ ಗ್ಯಾರಂಟಿಗಳ ಮೂಲಕ ನಿನೆಮಾ ಪ್ರಿಯರ ಮನ ಗೆಲ್ಲಲಿದೆ. ಪ್ರಾದೇಶಿಕ ಚಿತ್ರಗಳನ್ನು ಜನತೆ ಗೆಲ್ಲಿಸಬೇಕು. ತುಳುವ ಬಂಧುಗಳು ‘ಕೊರಮ್ಮ’ ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ಶಿವಧ್ವಜ್ ಶೆಟ್ಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!