ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದೆ. ವಿವಾದಿತ ಪಶ್ಚಿಮ ಸಮುದ್ರ ಪ್ರದೇಶದಲ್ಲಿ ಇಂದು ಮುಂಜಾನೆ ಉಭಯ ದೇಶಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸತತ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಉತ್ತರ ಕೊರಿಯಾದ ಆಕ್ರಮಣಕಾರಿ ಕ್ರಮಗಳೇ ಈ ಘಟನೆಗೆ ಕಾರಣ ಎಂದು ಹಲವು ದೇಶಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಉತ್ತರ ಕೊರಿಯಾ ಸಮುದ್ರ ಗಡಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಸ್ಥಿರತೆಗಾಗಿ 2018 ರ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಉತ್ತರ ಕೊರಿಯಾ ಹೇಳಿದೆ. ಇತ್ತ ದಕ್ಷಿಣ ಕೊರಿಯಾವನ್ನು ಎಚ್ಚರಿಸಲು 10 ಸುತ್ತು ಫಿರಂಗಿಗಳನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿದೆ.
ಈಗಾಗಲೇ ಸತತ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿರುವ ಉತ್ತರ ಕೊರಿಯಾದ ಕ್ರಮಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾಗಳು ಎಚ್ಚರಿಸಿವೆ. ಉತ್ತರ ಕೊರಿಯಾದ ಪ್ರಚೋದನೆಗಳು ನಿಲ್ಲದ ಕಾರಣ US ಪರಮಾಣು-ಚಾಲಿತ ವಾಹಕ USS ರೊನಾಲ್ಡ್ ರೇಗನ್ ಮತ್ತು ದಕ್ಷಿಣ ಕೊರಿಯಾದ ಯುದ್ಧನೌಕೆಗಳು ಕೊರಿಯನ್ ಪೆನಿನ್ಸುಲಾದ ಪೂರ್ವ ಕರಾವಳಿಯ ಅಂತಾರಾಷ್ಟ್ರೀಯ ನೀರಿನಲ್ಲಿ ಸಮರಾಭ್ಯಾಸ ನಡೆಸಿವೆ.