ಹೊಸದಿಗಂತ ಡಿಜಿಟಲ್ ಡೆಸ್ಕ್:
90ರ ದಶಕದ ಸಿನಿ ಪ್ರೇಕ್ಷಕರನ್ನು ಮೆಚ್ಚಿಸಿದ ಅನೇಕ ಕಲಾವಿದರು ಇಂದು ಸಿನಿಮಾ ಕ್ಷೇತ್ರದಿಂದ ದೂರವಾಗಿದ್ದಾರೆ. ಕೆಲವು ನಟರು ಲೈಮ್‌ಲೈಟ್‌ನಿಂದ ದೂರವಾಗಿ ತಮ್ಮ ಬದುಕನ್ನು ನಿಶ್ಶಬ್ದವಾಗಿ ನಡೆಸುತ್ತಿದ್ದಾರೆ. ಅಂತಹವರಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ ಅವರು ಕೂಡ ಒಬ್ಬರು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋ ಒಂದರಲ್ಲಿ ನಟ ಕೋಟ ಶ್ರೀನಿವಾಸ ರಾವ್ ಅವರನ್ನು ನೋಡಿದ ಸಿನಿ ಪ್ರೇಮಿಗಳು ಆಘಾತಕ್ಕೊಳಗಾಗಿದ್ದಾರೆ. ಹಲವಾರು ವರ್ಷಗಳಿಂದ ಚಿತ್ರರಂಗದಿಂದ ದೂರವಿರುವ ಅವರು ಇದೀಗ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಫೋಟೋ ಅವರನ್ನು ಭೇಟಿ ಮಾಡಿದ ಖ್ಯಾತ ನಿರ್ಮಾಪಕ ಬಂಡ್ಲಾ ಗಣೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಹಿರಿಯ ನಟ ಕೋಟಾ, ವಯೋಸಹಜ ಅಸ್ವಸ್ಥತೆಯ ಕಾರಣದಿಂದ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೊನೆಯ ಬಾರಿ 2023ರಲ್ಲಿ ಬಿಡುಗಡೆಯಾದ ‘ಸುವರ್ಣ ಸುಂದರಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ನಂತರದಿಂದ ಅವರು ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರವಿದ್ದಾರೆ.