ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿ ಕೊಲೆ ಮಾಡಲಾಗಿದೆ ಎಂದು ಅರೆಸ್ಟ್ ಆಗಿರುವ ಹತ್ತು ಆರೋಪಿಗಳು ಹೇಳಿಕೆ ನೀಡಿದ್ದು, ದರ್ಶನ್‌ರನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಪವಿತ್ರಾ ಗೌಡಾಗೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಅಶ್ಲೀಲ ಮೇಸೆಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ ಅನ್ನೋ ಆರೋಪದ ಮೇಲೆ ದರ್ಶನ್ ಗ್ಯಾಂಗ್ ಈ ಹತ್ಯೆ ನಡೆಸಿದೆ ಎನ್ನಲಾಗಿದೆ.ಚಿತ್ರದುರ್ಗದಲ್ಲಿದ್ದ
ರೇಣುಕಾಸ್ವಾಮಿಯನ್ನು ಜೂನ್ 1 ರಂದು ಬೆಂಗಳೂರಿಗೆ ಕರೆಸಲಾಗಿದೆ.
ದರ್ಶನ್ ಹೇಳಿದಂತೆ ಕೊಲೆ ಆರೋಪಿಗಳ ಗ್ಯಾಂಗ್ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯದ ವ್ಯಾಪ್ತಿಯಲ್ಲಿರುವ ಪಾಳುಬಿದ್ದ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದಾರೆ. ಅಲ್ಲಿ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ, ಈ ವೇಳೆ ದರ್ಶನ್ ಗುಪ್ತಾಂಗಕ್ಕೆ ಒದ್ದಿದ್ದಾರೆ. ತೀವ್ರ ಗಾಯಗೊಂಡ ರೇಣುಕಾಸ್ವಾಮಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆದು ಪರಾರಿಯಾಗಿದ್ದಾರೆ. ಜೂನ್ 9 ರಂದು ಮೋರಿ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್ ಸಿಬ್ಬಂದಿ ಮೃತದೇಹ ನೋಡಿದ್ದಾರೆ. ನಾಯಿಗಳು ಮೃತದೇಹ ಎಳೆದಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹ ವಶಕ್ಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಶವದ ಗುರುತು ಪತ್ತೆ ಮಾಡಿದ ಪೊಲೀಸರು ತನಿಖೆ ಚುರುಗೊಳಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದಿನ ತನಿಖೆ ಜಾರಿಯಲ್ಲಿದೆ.