October 15, 2026
Thursday, October 15, 2026
spot_img

ಎನ್‌ಆರ್‌ಸಿ/ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಕೆಪಿಸಿಸಿ ಸೂಚನೆ: ಅಂಜಲಿ ನಿಂಬಾಳ್ಕರ್

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯದಲ್ಲಿ ನಡೆಯುತ್ತಿರುವ ಎನ್‌ಆರ್‌ಸಿ/ಎಸ್‌ಐಆರ್ (NRC/SIR) ಪ್ರಕ್ರಿಯೆಯು ನಿಯಮಾನುಸಾರ ಹಾಗೂ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೂಚನೆ ನೀಡಿದ್ದು, ಕಿತ್ತೂರು ಕರ್ನಾಟಕ ಭಾಗದ ಪರಿಶೀಲನೆಯ ಜವಾಬ್ದಾರಿಯನ್ನು ನನ್ನಗೆ ವಹಿಸಲಾಗಿದೆ ಎಂದು ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಶುಕ್ರವಾರ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಶೇಕಡಾ 70ರಿಂದ 80ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಪಶ್ಚಿಮ ಬಂಗಾಳದಲ್ಲಿ ಇದೇ ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಜನರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಈಗಾಗಲೇ ಮೂರು ವರ್ಷಗಳು ಪೂರ್ಣಗೊಂಡಿವೆ ಇನ್ನು ಎರಡು ವರ್ಷಗಳ ಕಾಲವೂ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿಯೂ ಈ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಲಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಪ್ರತಿಯೊಬ್ಬ ನಾಗರಿಕರೂ ಎನ್‌ಆರ್‌ಸಿ/ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮನವಿ ಮಾಡಿದ ಅವರು, ಈ ಪ್ರಕ್ರಿಯೆಯಿಂದ ಹೊರಗುಳಿದರೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಇದೇ ವೇಳೆ, ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಲು ಸಹಾಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರೂ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ. ಯಾವುದೇ ಗೊಂದಲಕ್ಕೆ ಒಳಗಾಗದೆ ಪ್ರತಿಯೊಬ್ಬರೂ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಜಿಲ್ಲಾಅಧ್ಯಕ್ಷ ವಿನಯ್ ನಾವಲಗಟ್ಟಿ, ಪ್ರದೀಪ ಪ್ರಧಾನ ಕಾರ್ಯದರ್ಶಿ, ಅನಂತಕುಮಾರ್ ಬ್ಯಾಕೋಡ್, ವಿಜಯ್ ಗೆಜ್ಜಿ, ಶುಭಾಪ್ ಪೂಜಾರ, ಕಲ್ಲಪ್ಪಗೌಡ ಲಕ್ಕೇಗೌಡ, ಸಲೀಮ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Must Read