ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ದೇಶದ ವಿವಿಧೆಡೆ ಇರುವ ಇಸ್ಕಾನ್ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ.
ಬೆಂಗಳೂರಿನ ಇಸ್ಕಾನ್‌ನಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನೆರವೇರುತ್ತಿದ್ದು, ಕೃಷ್ಣ ರಾಧೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ರಂಗ ಮಂದಿರಲ್ಲಿ ರಾಧ-ಕೃಷ್ಣ ಉತ್ಸವ ಮೂರ್ತಿಗಳಿದ್ದು, ನಾಲ್ಕು ಬಾರಿ 108 ಬಗೆಯ ಜಲಾಮೃತದ ಅಭಿಷೇಕ ಮಾಡಲಾಗಿದೆ. ತದನಂತರ ಮುಖ್ಯ ಮಂದಿರದಲ್ಲಿ ನವಿಲಿನ ಅಲಂಕಾರ ಮಾಡಲಾಗಿದೆ.

ಇಂದು ಬೆಳಗ್ಗೆಯಿಂದ ತಡರಾತ್ರಿ 12 ಗಂಟೆಯವರೆಗೂ ದೇವರ ದರುಶನಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಒಂದೇ ದಿನ ನಾಲ್ಕೈದು ಲಕ್ಷ ಮಂದಿ ದೇಗುಲಕ್ಕೆ ಆಗಮಿಸಿ ದೇವರ ದರುಶನ ಪಡೆಯಲಿದ್ದಾರೆ.

ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ದ್ವಾಪರ ಯುಗದಲ್ಲಿ ಇದೇ ದಿನ ಭಗವಾನ್ ವಿಷ್ಣುವು ಭೂಮಿಯ ಮೇಲೆ ಶ್ರೀಕೃಷ್ಣನ ರೂಪದಲ್ಲಿ ಅವತಾರ ಪಡೆದಿದ್ದರು ಎಂಬ ನಂಬಿಕೆ ಇದೆ. ಅವರ ಜನ್ಮೋತ್ಸವವನ್ನು ಪ್ರತಿವರ್ಷ ಜನ್ಮಾಷ್ಟಮಿಯಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 4, 2026ರ ಶುಕ್ರವಾರ ಆಚರಿಸಲಾಗುತ್ತದೆ.



