ಹೊಸ ದಿಗಂತ ವರದಿ,ರಾಯಚೂರು
ಮಹಾರಾಷ್ಟ್ರದ ಘಟ್ಟದ ಸಾಲುಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಕೃಷ್ಣಾ ನದಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಏರುತ್ತಲೇ ಸಾಗುತ್ತಿರುವ ಪರಿಣಾಮ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಆತಂಕ ಸೃಷ್ಠಿ ಆಗುತ್ತಿವೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಗೆಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಬಹುತೇಕ ಜಲಾವೃತವಾಗಿ ಕಳಸ ಮಾತ್ರ ಉಳಿದುಕೊಂಡಿದೆ. ಕೃಷ್ಣಾ ನದಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ಒಂದೆರಡು ದಿನಗಳಲ್ಲಿ ದೇವಾಲಯ ಸಂಪೂರ್ಣವಾಗಿ ಮುಳುಗಡೆ ಆಗಲಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣವೂ ಅಧಿಕವಾಗಿರುವ ಹಿನ್ನಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರಿನ ಪ್ರಮಾಣ ಗಂಟೆ ಗಂಟೆಗೂ ಏರಿಕೆಯನ್ನು ಕಾಣುತ್ತಿದೆ.
ಪ್ರಸಕ್ತ ಕೃಷ್ಣಾ ನದಿಗೆ ೬೮೪೮೦ ಕ್ಯೂಸೆಕ್ಸ್ ನಿರನ್ನು ಬಿಡಲಾಗಿದೆ. ಇದೇ ರೀತಿ ನೀರಿನ ಹರಿವಿನಲ್ಲಿ ಏರಿಕೆ ಆದರೆ ಅಂದರೆ ಕೃಷ್ಣೆಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಬಿಟ್ಟರೆ ನದಿಯ ನೀರಿನ ಮಟ್ಟದಲ್ಲಿ ಬಹಳ ಏರಿಕೆಯಾಗಿ ಯಾದಗಿರಿ ಜಿಲ್ಲೆ ಸಂಪರ್ಕವನ್ನು ಕಲ್ಪಿಸುವ ಹೂವಿನಹೆಡಗಿ ಸೇತುವೆ ಮುಳುಗಡೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಸ್ಥಳಿಕರು. ಹೂವಿನಹೆಡಗಿ ಸೇತುವೆ ಮುಳುಗಡೆಗೂ ಕೆಲವೇ ಕೆಲವು ಅಡಿ ಬಾಕಿ ಇರುವುದು ಕಂಡುಬರುತ್ತಿದೆ.
ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದರಿಂದ ನದಿಗೆ ಯಾರೂ ಇಳಿಯವಾರದು, ಬಟ್ಟೆ, ಜಾನುವಾರುಗಳನ್ನು ತೊಳೆಯುವುದು ಸೇರಿದಂತೆ ಯಾರೂ ಹೋಗಬಾರದೆಂದು ಜಿಲ್ಲಾಡಳಿತ ಈಗಾಗಲೇ ಸೂಚನೆಯನ್ನು ನೀಡಿದೆ.