ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ಘಟ್ಟಮನೇನಿ ಕೃಷ್ಣ (80) ನಿಧನರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆಗೆ ಜ್ಯೂಬ್ಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರಿ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.
ಮಧ್ಯಾಹ್ನ ಒಂದು ಗಂಟೆಗೆ ಕೃಷ್ಣ ಅವರ ಪಾರ್ಥಿವ ಶರೀರವನ್ನು ಗಚಿಬೌಲಿಯ ಆಸ್ಪತ್ರೆಯಿಂದ ನಾನಕ್ ರಾಮಗುಡದಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದು, ಜೊತೆಗೆ ಪುತ್ರ ಮಹೇಶ್ ಬಾಬು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ.
ಕೃಷ್ಣ ಅವರ ಪಾರ್ಥಿವ ಶರೀರವನ್ನು ನಾನಕ್ ರಾಮಗುಡ ಅವರ ನಿವಾಸದಿಂದ ಗಚಿಬೌಲಿ ಕ್ರೀಡಾಂಗಣಕ್ಕೆ ಸಂಜೆ 5 ಗಂಟೆಗೆ ಸ್ಥಳಾಂತರಿಸಲಾಗುವುದು. ಜನರು ಮತ್ತು ಅಭಿಮಾನಿಗಳಿಗಾಗಿ ನಾಳೆ (ಬುಧವಾರ) ಬೆಳಗಿನವರೆಗೂ ಅಲ್ಲಿಯೇ ಇರಿಸಲಾಗುವುದು. ಬಳಿಕ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಪದ್ಮಾಲಯ ಸ್ಟುಡಿಯೋಗೆ ಸ್ಥಳಾಂತರಿಸಲಾಗುವುದು ಮತ್ತು ಕೆಲವು ವಿಧಿವಿಧಾನಗಳು ಪೂರ್ಣಗೊಂಡ ನಂತರ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಜ್ಯೂಬ್ಲಿ ಹಿಲ್ಸ್ ಮಹಾಪ್ರಸ್ಥಾನಕ್ಕೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.