ಹೊಸದಿಗಂತ ವರದಿ ಕಲಬುರಗಿ:
ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನೇ ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.
ಕಲಬುರ್ಗಿಯಲ್ಲಿ ಪಕ್ಷದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ನಿಷೇಧಿತ ಪಿಎಫ್ಐ ಅನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿರುವುದು ಹಾಸ್ಯಾಸ್ಪದ. ರಾವಣ ಆಂಜನೇಯನ ಬಾಲಕ್ಕೆ ಬೆಂಕಿಯಿಟ್ಟ ಇದರಿಂದ ಇಡೀ ಲಂಕೆಯೇ ನಾಶವಾಯಿತು. ಹಾಗೇ ಬಜರಂಗದಳವನ್ನು ಮುಟ್ಟಿದ್ದರಿಂದ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್ ಐ ಮೇಲಿದ್ದ 173 ಪ್ರಕರಣ ಹಿಂಪಡೆಯಿತು. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ದೇಶದಲ್ಲಿ ಪಿಎಫ್ ಐ ಬ್ಯಾನ್ ಆಗಿದೆ ಎನ್ನುವುದೂ ಕಾಂಗ್ರೆಸ್ ಗೆ ತಿಳಿದಿಲ್ಲ. ದೇಶದ ಯುವಕರಿಗೆ ರಾಷ್ಟ್ರ ಪ್ರೇಮದ ಬಗ್ಗೆ ಸ್ಪೂರ್ತಿ ತುಂಬುವ ಹಾಗೂ ದೇಶಾದ್ಯಂತ ನಡೆಯುವ ಗೋಹತ್ಯೆಯನ್ನು ತಡೆಯುವ ಬಜರಂಗ ದಳವನ್ನು ಬ್ಯಾನ್ ಮಾಡುವ ಧೈರ್ಯ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹೇಗೆ ಬಂತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆ ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಪಕ್ಷದ ಪ್ರಣಾಳಿಕೆ ಇದ್ದಂತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಕಾಂಗ್ರೆಸ್ ರಾಷ್ಟ್ರದ್ರೋಹಿ ಪ್ರಣಾಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ.