ಹೊಸದಿಗಂತ ವರದಿ, ದಾವಣಗೆರೆ:
ದ್ವಿಚಕ್ರ ವಾಹನಕ್ಕೆ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರ್ ಟಿಓ ಕಚೇರಿ ಅಧೀಕ್ಷಕರೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಗರದ ರಿಂಗ್ ರಸ್ತೆಯ ಎಜು ಏಷ್ಯಾ ಸ್ಕೂಲ್ ಬಳಿ ಸಂಭವಿಸಿದೆ.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಪಿ.ತಿಪ್ಪೇಶಪ್ಪ(41 ವರ್ಷ) ಮೃತ ವ್ಯಕ್ತಿ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಇವರು ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆಗೆ ವರ್ಗಾವಣೆಯಾಗಿ ಬಂದಿದ್ದರು. ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಮನೆಯಿಂದ ಎಂದಿನಂತೆ ಹೋಂಡಾ ಆಕ್ಟೀವಾದಲ್ಲಿ ಕಚೇರಿಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ತಿಪ್ಪೇಶಪ್ಪನವರ ದ್ವಿಚಕ್ರ ವಾಹನಕ್ಕೆ ದಾವಣಗೆರೆ ಕಡೆಯಿಂದ ರಾಣೇಬೆನ್ನೂರಿಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ತಾಗಿದೆ. ಈ ವೇಳೆ ಗಲಿಬಿಲಿಯಾದ ತಿಪ್ಪೇಶಪ್ಪ ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗಡೆ ಬಿದ್ದಿದ್ದಾರೆ. ಆಗ ವೇಗವಾಗಿ ಚಲಿಸುತ್ತಿದ್ದ ಬಸ್ ಚಕ್ರಕ್ಕೆ ತಲೆ ಸಿಲುಕಿದ್ದು, ಹೆಲ್ಮೆಟ್ ಧರಿಸಿದ್ದರೂ ತೀವ್ರ ರಕ್ತಸ್ರಾವವಾಗಿ ತಿಪ್ಪೇಶಪ್ಪ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಜಮಾಯಿಸಿದ ಜನರು, ಹತ್ತಿರ ಹೋಗಿ ನೋಡಿದಾಗ ತಿಪ್ಪೇಶಪ್ಪನವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಕಚೇರಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ತಿಪ್ಪೇಶಪ್ಪ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಸೌಮ್ಯ ಸ್ವಭಾವದವರಾದ ಇವರ ಕಾರ್ಯವೈಖರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಾವಿನಿಂದ ವರಮಹಾಲಕ್ಷ್ಮೀ ಹಬ್ಬದ ದಿನವೇ ಮನೆಯಲ್ಲಿ ಸೂತಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ನಗರ ಡಿವೈಎಸ್ಪಿ ಶರಣಬಸವೇಶ್ವರ ಭೇಟಿ ನೀಡಿ ಪರಿಶೀಲಿಸಿದರು. ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.