ಹೊಸದಿಗಂತ ವರದಿ ಮಡಿಕೇರಿ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಇದೇ ಪ್ರಥಮ ಬಾರಿಗೆ ನೆಲಕ್ಕೆ ಉರುಳಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ದಟ್ಟ ಮಂಜು ಕವಿದಿದ್ದ ರಸ್ತೆಯಲ್ಲಿ ಬಂದ ಬಸ್, ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ಡಿಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕೆ ಉರುಳಿರುವುದಾಗಿ ಹೇಳಲಾಗಿದೆ.
ಕಳೆದ ಐದು ದಶಕಗಳಿಗೂ ಅಧಿಕ ಕಾಲದಿಂದ ಇರುವ ವೀರ ಸೇನಾನಿಯ ಪ್ರತಿಮೆಗೆ ಇದೇ ಮೊದಲ ಬಾರಿಗೆ ಹಾನಿಯಾಗಿದ್ದು, ಈ ಪ್ರತಿಮೆಯೊಂದಿಗೆ ಕೊಡಗಿನ ಜನತೆ ಭಾವನಾತ್ಮಕ ಸಂಬಂಧವನ್ನು ಇರಿಸಿಕೊಂಡಿದ್ದಾರೆ. ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿರುವ ಘಟನೆ ತಿಳಿದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಮೇಲ್ನೋಟಕ್ಕೆ ಇದು ಅಜಾಗರೂಕತೆಯ ವಾಹನ ಚಾಲನೆಯಿಂದ ನಡೆದಿರುವುದಾಗಿ ಕಂಡು ಬಂದಿದ್ದು, ಈ ಸಂಬಂಧ ನೈಜ ವರದಿ ನೀಡಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಜನತೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವ ಜನರಲ್ ತಿಮ್ಮಯ್ಯ ಅವರ ಪುತ್ಥಳಿಯನ್ನು ಗೌರವ ಪೂರ್ವಕವಾಗಿ ಅದೇ ಸ್ಥಳದಲ್ಲಿ ಮರು ಸ್ಥಾಪಿಸಲಾಗುವುದು ಎಂದು ಪೊನ್ನಣ್ಣ ಸ್ಪಷ್ಟಪಡಿಸಿದರು.